ಸಿನಿವಾಣಿ

ದೇವರಾದ ನಟ ಪುನೀತ್! ಡಾರ್ಲಿಂಗ್ ಕೃಷ್ಣಗೆ ಸರಿಯಾದ ದಾರಿ ತೋರಿಸಲಿರುವ ಪವರ್​ಸ್ಟಾರ್...

ಬೆಂಗಳೂರು: ಕೆಲವು ಗಂಟೆಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಪ್ರಪಂಚ ಸಜ್ಜಾಗಿದೆ. ಹೀಗಾಗಿ, ಅನೇಕ ಮುಂಬರುವ ಸಿನಿಮಾಗಳು ತಮ್ಮ ಚಿತ್ರದ ಹೊಸ ಹೊಸ ಪೋಸ್ಟರ್​ ರಿಲೀಸ್​ ಮಾಡುವ ಮೂಲಕ ಸಿನಿಪ್ರಿಯರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅದೇ ರೀತಿ ಅಪ್ಪು ನಟನೆಯ ‘ಲಕ್ಕಿ ಮ್ಯಾನ್​’ ಸಿನಿಮಾದ ಪೋಸ್ಟರ್​ ಬಿಡುಗಡೆ ಆಗಿದೆ. ಇದರಲ್ಲಿ ಅಪ್ಪು ಅವರ ನೋಟ ಕಂಡು ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಈ ಸಿನಿಮಾದಲ್ಲಿ ನಟ ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಷಿನಿ ಪ್ರಕಾಶ್, ನಾಗಭೂಷಣ ಮತ್ತು ಮುಂತಾದವರು ಅಭಿನಯಿಸಿದ್ದಾರೆ. ನಟ ಪುನೀತ್​ ರಾಜ್​ಕುಮಾರ್ ಅವರು ನಿಧನರಾಗುವುದಕ್ಕೂ ಮುನ್ನ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆದರೆ ಆ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದರು. ಅಪ್ಪು ಕೊನೆಯದಾಗಿ ನಟಿಸಿದ ಸಿನಿಮಾಗಳ ಪೈಕಿ ‘ಲಕ್ಕಿ ಮ್ಯಾನ್​’, 'ಜೇಮ್ಸ್' ಚಿತ್ರಗಳು, ಸಿನಿಮಾದ ಎಲ್ಲಾ ಕೆಲಸಗಳನ್ನು ಪೂರ್ತಿ ಮಾಡಿ ಈಗ ಬಿಡುಗಡೆಗೆ ರೆಡಿಯಾಗಿವೆ. 
ಕೆಲವೇ ದಿನಗಳ ಹಿಂದೆ ‘ಲಕ್ಕಿ ಮ್ಯಾನ್​’ ಚಿತ್ರದ ಕೆಲವು ಫೋಟೋಗಳು ವೈರಲ್ ಆಗಿದ್ದವು. ಪುನೀತ್​ ಅವರು ಪ್ರಭುದೇವ ಜತೆ ಡ್ಯಾನ್ಸ್​ ಮಾಡುತ್ತಿದ್ದ ಫೋಟೋ, ವಿಡಿಯೋಗಳು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದರು. ‘ಲಕ್ಕಿ ಮ್ಯಾನ್​’ ಚಿತ್ರ ತಮಿಳಿನ 'ಓ ಮೈ ಖಡವುಲೆ' ಚಿತ್ರದ ರಿಮೇಕ್ ಆಗಿದೆ. ಹಾಗಾಗಿ, ತಮಿಳಿನಲ್ಲಿ ನಟ ವಿಜಯ್ ಸೇತುಪತಿ ನಟಿಸಿದ ದೇವರ ಪಾತ್ರದಲ್ಲಿ, ಪುನೀತ್ ಅವರು ಕನ್ನಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ, ದೇವರಾಗಿ ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಸರಿಯಾದ ದಾರಿ ತೋರಿಸಲಿದ್ದಾರಂತೆ. ಈಗ ಸಿನಿಮಾದ ಈ ಹೊಸ ಪೋಸ್ಟರ್​ ಚಿತ್ರದ ಮೇಲೆ ಅಪ್ಪು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಸದ್ಯ, ಹೊಸ ಪೋಸ್ಟರ್ ಸಾಮಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.