ಬೆಂಗಳೂರು: ಯಾವುದಾದರೂ ವಿಶೇಷ ದಿನ ಬಂದರೆ ಸಾಕು, ಆ ದಿನಕ್ಕೆ ಸಂಬಂಧಿಸಿದ ಪೋಸ್ಟರ್ಗಳ ಮೂಲಕ ಅಭಿಮಾನಿಗಳ ಮುಂದೆ ಬಂದು ನಿಲ್ಲುತ್ತಾರೆ ಸ್ಟಾರ್ಗಳು. ಅದರಂತೆ ಫೆ. 14ರ ಪ್ರೇಮಿಗಳ ದಿನದ ಪ್ರಯುಕ್ತ ಸ್ಯಾಂಡಲ್ವುಡ್ನ ಹಲವು ಸಿನಿಮಾ ತಂಡದವರು ಪೋಸ್ಟರ್, ಹಾಡು ಮತ್ತು ಟೀಸರ್ ಹೊತ್ತು ಬಂದಿದ್ದಾರೆ.
‘ಜೋಗಿ’ ಪ್ರೇಮ್ ನಿರ್ದೇಶನದ, ರಾಣಾ ಮತ್ತು ರೀಷ್ಮಾ ನಾಣಯ್ಯ ನಟಿಸಿರುವ ‘ಏಕ್ಲವ್ಯಾ’ ಚಿತ್ರದ ಹಾಡು ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಬಿಡುಗಡೆ ಆಗಿದೆ. ಕೇವಲ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂನಲ್ಲಿ ಹಾಡು ಮೋಡಿ ಮಾಡುತ್ತಿದೆ. ಕಳೆದ ವರ್ಷವೇ ಈ ಹಾಡಿನ ಸಣ್ಣ ತುಣುಕನ್ನು ಹರಿಬಿಟ್ಟಿದ್ದ ಪ್ರೇಮ್ ಇದೀಗ 3 ನಿಮಿಷ 50 ಸೆಕೆಂಡ್ನ ಹಾಡನ್ನು ಬಿಡುಗಡೆ ಮಾಡಿದ್ದು, ಅರ್ಜುನ್ ಜನ್ಯ ಸಂಗೀತಕ್ಕೆ ಪುನೀತ್ ರಾಜಕುಮಾರ್ ಸಹ ಮರುಳಾಗಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನೇನು ಶೀಘ್ರದಲ್ಲಿಯೇ ಬಹುಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಅದೇ ರೀತಿ ‘ನೆನಪಿರಲಿ’ ಪ್ರೇಮ್ ಅವರ ಸಿನಿಮಾ ವೃತ್ತಿಜೀವನದ 25ನೇ ಚಿತ್ರವಾಗಿ ‘ಪ್ರೇಮಂ ಪೂಜ್ಯಂ’ ಸಿದ್ಧವಾಗಿದೆ. ವಿಶೇಷತೆಯ ಜತೆಗೆ ಆಗಮಿಸಲಿದ್ದೇವೆ ಎಂದು ಹೇಳಿ ಕೊಂಡಿದ್ದ ತಂಡ, ಸರ್ಪ್ರೖೆಸ್ ರೀತಿಯಲ್ಲಿ ಟೀಸರ್ ಬಿಡುಗಡೆ ಮಾಡಿದೆ. ನಾಯಕಿಯರಾದ ಐಂದ್ರಿತಾ ರೇ, ಬ್ರಿಂದಾ ಕಿರು ಟೀಸರ್ನಲ್ಲಿ ಕಾಣಿಸುತ್ತಾರೆ.
ಟಾಲಿವುಡ್ ನಟ ಪ್ರಭಾಸ್ ಮತ್ತು ಪೂಜಾ ಹೆಗಡೆ ಮುಖ್ಯ ಭೂಮಿಕೆಯಲ್ಲಿರುವ ‘ರಾಧೆ ಶ್ಯಾಮ್ ಸಿನಿಮಾ ಸಹ ಟೀಸರ್ ಮೂಲಕ ಮೋಡಿ ಮಾಡುತ್ತಿದೆ. ಮೂಲ ತೆಲುಗು ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಟೀಸರ್ ರಿಲೀಸ್ ಆಗಿದ್ದು, ಜು. 30ಕ್ಕೆ ಸಿನಿಮಾ ತೆರೆಕಾಣಲಿದೆ ಎಂಬ ವಿಚಾರವನ್ನೂ ಘೋಷಿಸಿಕೊಂಡಿದೆ. ಇವೆಲ್ಲ ಹಾಡು ಮತ್ತು ಟೀಸರ್ಗಳ ವಿಚಾರವಾದರೆ, ‘ರೇಮೊ’, ‘ಶುಗರ್ ಫ್ಯಾಕ್ಟರಿ’, ‘ಶೋಕಿವಾಲಾ’, ‘ರೈಡರ್’, ‘ಪದವಿಪೂರ್ವ’ ಸೇರಿ ಸಾಕಷ್ಟು ಚಿತ್ರತಂಡಗಳು ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ವಿಶೇಷ ಪೋಸ್ಟರ್ ಮೂಲಕ ಶುಭಾಶಯ ಕೋರಿವೆ.