ಸಿನಿವಾಣಿ

ಸೆನ್ಸಾರ್​ನತ್ತ ಲವ್ ಮಾಕ್​ಟೇಲ್ 2; ‘ಡಾರ್ಲಿಂಗ್’ ಕೃಷ್ಣ ಮತ್ತು ಮಿಲನಾ ನಾಗರಾಜ್ ಅಭಿನಯ

Webdesk - Ravikanth

ಬೆಂಗಳೂರು: ಸ್ಯಾಂಡಲ್​ವುಡ್​ನ ತಾರಾ ಜೋಡಿ ‘ಡಾರ್ಲಿಂಗ್’ ಕೃಷ್ಣ ಮತ್ತು ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್​ಟೇಲ್ 2’ ಚಿತ್ರದ ಕೆಲಸಗಳು ಮುಗಿದಿದ್ದು, ಸೆನ್ಸಾರ್ ಮಂಡಳಿಯು ಸದ್ಯದಲ್ಲೇ ಚಿತ್ರವನ್ನು ವೀಕ್ಷಿಸಲಿದೆ. ಕೃಷ್ಣ ಅಭಿನಯದ ಮತ್ತು ನಿರ್ದೇಶನದ ‘ಲವ್ ಮಾಕ್ಟೇಲ್’ ಚಿತ್ರವು 2020ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿ, ಮೆಚ್ಚುಗೆ ಪಡೆದಿತ್ತು. ಚಿತ್ರದ ಬಿಡುಗಡೆಯ ಸಂದರ್ಭದಲ್ಲೇ ಅದರ ಮುಂದುವರೆದ ಭಾಗದ ಬಗ್ಗೆ ಚಿತ್ರತಂಡ ಪ್ರಸ್ತಾಪ ಮಾಡಿತ್ತು. ಚಿತ್ರ ಯಶಸ್ವಿಯಾಗುತ್ತಿದ್ದಂತೆಯೇ ಎರಡನೆಯ ಭಾಗಕ್ಕೆ ಬೇಡಿಕೆ ಹೆಚ್ಚಿದ್ದರಿಂದ, ಕೃಷ್ಣ ಮತ್ತು ಮಿಲನಾ ಸೀಕ್ವೆಲ್​ಗೆ ತಯಾರಿ ನಡೆಸಿದರು. ಅದರಂತೆ ಕಳೆದ ವರ್ಷವೇ ಚಿತ್ರದ ಚಿತ್ರೀಕರಣ ಸಹ ಪ್ರಾರಂಭವಾಯಿತು.

ಹೀಗೆ ಶುರುವಾದ ಚಿತ್ರದ ಚಿತ್ರೀಕರಣ, ಕೆಲವು ತಿಂಗಳ ಹಿಂದೆ ಮುಗಿದಿತ್ತು. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಮುಗಿದಿವೆ. ‘ಲವ್ ಮಾಕ್​ಟೇಲ್ 2’ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ನಿರ್ದೇಶನ ಮಾಡಿದ್ದು, ಈ ಪೈಕಿ ‘ನಿನದೇನೆ ಜನುಮ’ ಎಂಬ ಹಾಡಿಗೆ ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿತ್ರದಲ್ಲಿ ಕೃಷ್ಣ ಜತೆಗೆ ಮಿಲನಾ, ರಾಚೆಲ್ ಡೇವಿಡ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ‘ಕ್ರೇಜಿಮೈಂಡ್ಸ್’ ಶ್ರೀ ಛಾಯಾಗ್ರಹಣ ಮಾಡಿದ್ದಾರೆ.