ಸಿನಿವಾಣಿ

ಲಾಕ್​ಡೌನ್​ನಲ್ಲಿ ನಡೆದ ದುರಂತ ಪ್ರೇಮಕಥೆಗೆ ಸಿನಿಮಾ ಸ್ಪರ್ಶ!

ಬೆಂಗಳೂರು: ಕರೋನಾ ಲಾಕ್‍ಡೌನ್ ಸಮಯದಲ್ಲಿ ಜಗತ್ತಿನಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆದಿರುವ ಸುದ್ದಿಗಳನ್ನು ಓದಿರಬಹುದು.ಈಗ ಆ ಸಮಯದಲ್ಲಿ ನಡೆದಂಥ ಪ್ರೀತಿ-ಪ್ರೇಮ-ಪ್ರಣಯದ ಕಥೆಯನ್ನು ತೆರೆಯ ಮೇಲೆ ತರಲು ಹೊರಟಿದ್ದಾರೆ ನಿರ್ದೇಶಕ ಮಂಜುನಾಥ್ ಬಿ.ರಾಮ್. ಅಷ್ಟೇ ಅಲ್ಲ, ಚಿತ್ರಕ್ಕೆ 'ಲವ್ ಇನ್​ ಲಾಕ್​ಡೌನ್​' ಎಂಬ ಹೆಸರನ್ನೇ ಅವರು ಇಟ್ಟಿದ್ದಾರೆ.

ನಿರ್ದೇಶಕ ಮಂಜುನಾಥ್ ಬಿ.ರಾಮ್ ಅವರು ತಾವು ಕಣ್ಣಾರೆ ಕಂಡ ಪ್ರೇಮಕಥೆಯೊಂದನ್ನು ಹಾಗೂ ಅದರ ದುರಂತ ಅಂತ್ಯವನ್ನು ಸಿನಿಮಾ ರೂಪಕ್ಕೆ ತಂದಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ಅವರೇ ಬರೆದಿದ್ದಾರೆ. ಜೊತೆಗೆ ಚಿತ್ರದಲ್ಲಿ ಹೀರೋ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

'ಲವ್ ಇನ್ ಲಾಕ್‍ಡೌನ್' ಚಿತ್ರದ ಮುಹೂರ್ತವು ಇತ್ತೀಚೆಗೆ ಚಿಕ್ಕಬಳ್ಳಾಪುರದ ರಂಗಸ್ಥಳದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ನಡೆಯಿತು. 'ನಾ ಕನ್ನಡಿಗನೆಂದುಕೊಂಡು ಬಾಳುಮಗಾ ...' ಎನ್ನುವ ಕನ್ನಡ ಹಾಗೂ ಕನ್ನಡ ನಾಡಿನ ಮಹತ್ವ ಸಾರುವ ಗೀತೆಯನ್ನು ಸುಮಾರು 40 ಮಂದಿ ನೃತ್ಯಕಲಾವಿದರನ್ನು ಬಳಸಿಕೊಂಡು ಚಿತ್ರೀಕರಿಸಲಾಯಿತು.

'ಲವ್ ಇನ್ ಲಾಕ್ ಡೌನ್' ಚಿತ್ರದಲ್ಲಿ ನಾಯಕನಾಗಿ ಮಂಜುನಾಥ್ ಮತ್ತು ನಾಯಕಿಯಾಗಿ ಯಶಸ್ವಿ ನಟಿಸುತ್ತಿದ್ದಾರೆ. ಯಶಸ್ವಿ ಈ ಹಿಂದೆ 'ಲೆಕ್ಕಾಚಾರ' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ಇದು ಇವರ ಎರಡನೇ ಚಿತ್ರವಾಗಿದೆ. ಈ ಚಿತ್ರದಲ್ಲಿ ಕಿಲ್ಲರ್ ವೆಂಕಟೇಶ್, ಬ್ಯಾಂಕ್ ಜನಾರ್ದನ್, ಗಣೇಶ್​ ರಾವ್​, ಪಲ್ಲವಿ ರಾಜೇಂದ್ರ ಮೊದಲಾದವರು ನಟಿಸುತ್ತಿದ್ದು ರಮೇಶ್ ಕೊಯಿರಾ ಅವರ ಛಾಯಾಗ್ರಹಣ, ಡ್ಯಾನಿಯಲ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಈ ಚಿತ್ರವನ್ನು ಚಿಕ್ಕಬಳ್ಳಾಪುರ, ಕೋಲಾರ, ಗಜೇಂದ್ರಗಢ ಸುತ್ತಮುತ್ತ ಒಟ್ಟು ಮೂರು ಹಂತದಲ್ಲಿ ಚಿತ್ರೀಕರಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.