ಬೆಂಗಳೂರು: ಪ್ರವೀಣ್ ಮತ್ತು ರಚನಾ ಇಂದರ್ ಅಭಿನಯದಲ್ಲಿ ‘ಲವ್ 360’ ಎಂಬ ಚಿತ್ರವನ್ನು ಶಶಾಂಕ್ ನಿರ್ದೇಶಿಸುತ್ತಿರುವ ಸುದ್ದಿ ಗೊತ್ತಲ್ಲ? ಈ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಬೆಂಗಳೂರಿನಲ್ಲಿ ಸದ್ದಿಲ್ಲದೆ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ ಶಶಾಂಕ್.
ಇದನ್ನೂ ಓದಿ: ಕಿಚ್ಚನ ಬರ್ತಡೇಗೆ ವಿಕ್ರಾಂತ್ ರೋಣ ಚಿತ್ರತಂಡದಿಂದ ಬಿಗ್ ಸರ್ಪ್ರೈಸ್: ಡೆಡ್ ಮ್ಯಾನ್ ಎಂಟ್ರಿಗೆ ಕೌಂಟ್ಡೌನ್!
ಸಾಮಾನ್ಯವಾಗಿ, ಪೋಸ್ಟರ್‌ನಲ್ಲಿ ನಾಯಕ-ನಾಯಕಿಯ ದೊಡ್ಡ ಫೋಟೋ ಇರುವುದು ವಾಡಿಕೆ. ಆದರೆ, ಇಲ್ಲಿ ಏಳು ಸಣ್ಣಸಣ್ಣ ಫೋಟೋಗಳಿವೆ. ಜತೆಗೆ ಸಮುದ್ರದಡವೂ ಇದೆ. ಇವೆಲ್ಲವೂ ಚಿತ್ರದ ಸಾರಾಂಶ ಹೇಳುತ್ತದೆ ಎನ್ನುತ್ತಾರೆ ಶಶಾಂಕ್.
‘ಪೋಸ್ಟರ್ ಮೂಲಕ ಚಿತ್ರದ ಮೂಡ್ ಹೇಳುವ ಪ್ರಯತ್ನ ಮಾಡಿದ್ದೇನೆ. ಹೆಸರೇ ಹೇಳುವಂತೆ, ಇಲ್ಲಿ ಪ್ರೀತಿಯ ವಿವಿಧ ಭಾವನೆಗಳಿವೆ. ಒಬ್ಬ ನಿಜವಾದ ಪ್ರೇಮಿ ಎಂದರೆ, ಆ ಹುಡುಗಿಯನ್ನು ಎಲ್ಲ ಆ್ಯಂಗಲ್‌ಗಳಿಂದ ರಕ್ಷಣೆ ಮಾಡುತ್ತಾನೆ. ಪ್ರತಿ ಕ್ಷಣ ಅವಳ ಜತೆಗಿರುತ್ತಾನೆ. ಅವಳ ಪ್ರತಿ ಸುಖ-ದು:ಖದಲ್ಲೂ ಅವನಿರುತ್ತಾನೆ. ಅವನೊಬ್ಬ 360 ಡಿಗ್ರಿ ಪ್ರೇಮಿಯಾಗಿರುತ್ತಾನೆ. ಬೇಷರತ್ ಪ್ರೀತಿ ಹೇಗಿರುತ್ತದೆ ಎಂಬುದಕ್ಕೆ ನಾಯಕನ ಪಾತ್ರ ಉದಾಹರಣೆಯಾಗಿರುತ್ತದೆ. ಇನ್ನು, ಇಡೀ ಕಥೆ ಕರಾವಳಿಯ ಪ್ರದೇಶದಲ್ಲಿ ನಡೆಯುವುದರಿಂದ, ಸಮುದ್ರದಡವನ್ನೂ ತೋರಿಸಲಾಗಿದೆ’ ಎಂದು ಶಶಾಂಕ್ ಮಾಹಿತಿ ಕೊಡುತ್ತಾರೆ.
‘ಲವ್ 360’ ಕನ್ನಡವಲ್ಲದೆ ತೆಲುಗಿನಲ್ಲೂ ತಯಾರಾಗುತ್ತಿದೆ. ಹಾಗಂತ ಎರಡೂ ಭಾಷೆಗಳಲ್ಲಿ ಬೇರೆಬೇರೆ ಕಲಾವಿದರು ಇರುವುದಿಲ್ಲವಂತೆ. ‘ಹೊಸ ಮುಖಗಳಾಗಿರುವುದರಿಂದ ಎರಡೂ ಭಾಷೆಗಳಿಗೆ ಹೊಂದುವವರನ್ನೇ ಆಯ್ಕೆ ಮಾಡಿದ್ದೇವೆ. ಪ್ರವೀಣ್ ಮತ್ತು ರಚನಾ ಜತೆಗೆ ಗೋಪಾಲಕೃಷ್ಣ ದೇಶಪಾಂಡೆ ನಟಿಸುತ್ತಿದ್ದಾರೆ. ಜತೆಗೆ, ಇನ್ನೊಂದು ಹೊಸ ಜೋಡಿಯನ್ನು ಪರಿಚಯಿಸಲಾಗುತ್ತಿದೆ’ ಎನ್ನುತ್ತಾರೆ.
ಚಿತ್ರಕ್ಕೆ ಅಭಿಲಾಷ್ ಕಲತ್ತಿ ಛಾಯಾಗ್ರಹಣ ಮಾಡಿದರೆ, ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ.