ಸಿನಿವಾಣಿ

ಸಿನಿಮಾ ತೆರೆ ಕಾಣಲೇಬೇಕು ... ಚಿತ್ರಮಂದಿರಗಳು ವಿಜೃಂಭಿಸಲೇ ಬೇಕು ...

manjunathktgns

ಬೆಂಗಳೂರು: ಸಿನಿಮಾ ಪ್ರದರ್ಶನಕ್ಕೆ ಕೇಂದ್ರ ಸರ್ಕಾರವು ಅಕ್ಟೋಬರ್​ 15ರಿಂದಲೇ ಅನುಮತಿ ನೀಡಿದೆ. ಕಳೆದ ಒಂದು ತಿಂಗಳಿನಿಂದ ಚಿತ್ರಪ್ರದರ್ಶನ ನಡೆಯುತ್ತಿದ್ದರೂ, ಪ್ರೇಕ್ಷಕರು ಮಾತ್ರ ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಹೋಗುತ್ತಿಲ್ಲ.

ಈ ನಿಟ್ಟಿನಲ್ಲಿ ಕೆಆರ್​ಜಿ ಸ್ಟುಡಿಯೋಸ್​ನ ಕಾರ್ತಿಕ್​ ಗೌಡ ಮತ್ತು ಯೋಗಿ ಜಿ ರಾಜ್​ ಹೊಸ ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ. ಕನ್ನಡದ ಪ್ರಮುಖ ಕಲಾವಿದರಾದ ಶಿವರಾಜಕುಮಾರ್​, ಪುನೀತ್​ ರಾಜಕುಮಾರ್​, ಶ್ರೀಮುರಳಿ, ಗಣೇಶ್​, 'ದುನಿಯಾ' ವಿಜಯ್​, ಧನಂಜಯ್​ ಮುಂತಾದವರನ್ನು ಸೇರಿಸಿಕೊಂಡು ಜನರನ್ನು ಮತ್ತೆ ಚಿತ್ರಮಂದಿರದತ್ತ ಕರೆದುಕೊಂಡು ಬರುವ ಒಂದು ಭಾವನಾತ್ಮಕ ವಿಡಿಯೋವೊಂದನ್ನು ಮಾಡಿದ್ದಾರೆ.

'ನೂರು ವರುಷಗಳ ಇತಿಹಾಸವಿರುವ ಸಿನಿಮಾ ಇಂದಲ್ಲ ನಾಳೆ ತೆರೆ ಕಾಣಲೇಬೇಕು ... ಚಿತ್ರಮಂದರಿಗಳು ವಿಜೃಂಬಿಸಲೇಬೇಕು ...' ಎಂದು ಪ್ರಾರಂಭವಾಗುವ ಈ ವಿಡಿಯೋದಲ್ಲಿ ಕಳೆದ ಆರೇಳು ತಿಂಗಳುಗಳಿಂದ ಹೇಗೆ ಚಿತ್ರಮಂದಿರಗಳು ಧೂಳುಹಿಡಿದು ಕೂತಿರುವಾಗ, ಲಾಕ್​ಡೌನ್​ ಮುಗಿದು ಚಿತ್ರಮಂದಿರ ಪುನಃ ತೆರೆಯಲಾಗುತ್ತದೆ. ಲಾಕ್​ಡೌನ್​ಗೂ ಮೊದಲು ಇದ್ದಂತೆ ಪರಿಸ್ಥಿತಿ ಮರುಕಳಿಸುವುದಕ್ಕೆ ಸಾಧ್ಯವಾ? ಚಿತ್ರಮಂದಿರ ತುಂಬಿದೆ ಎಂಬ ಬೋರ್ಡು, ಸಂಭ್ರಮ, ಪಟಾಕಿ ಇವೆಲ್ಲಾ ಪುನಃ ನೋಡುವುದಕ್ಕೆ ಸಾಧ್ಯವಾ? ಎಂದು ಪ್ರಶ್ನಿಸಿಕೊಳ್ಳುವ ಹೊತ್ತಿಗೆ, ಮೊದಲಿನಿಂತೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ದೃಶ್ಯಗಳನ್ನು ತೋರಿಸಲಾಗಿದೆ.

ನಂತರ, ನಟರಾದ ಶಿವರಾಜಕುಮಾರ್​, ಪುನೀತ್​ ರಾಜಕುಮಾರ್​, ಶ್ರೀಮುರಳಿ, ಗಣೇಶ್, ಧನಂಜಯ್​​ ಮತ್ತು 'ದುನಿಯಾ' ವಿಜಯ್​ ಕಾಣಿಸಿಕೊಂಡು ಚಿತ್ರಮಂದಿರಗಳ ಮಹತ್ವವನ್ನು ಅರ್ಥ ಮಾಡಿಸುತ್ತಾರೆ. ಎಲ್ಲರೂ ಸೇರಿ ಸಿನಿಮಾನ ಸಂಭ್ರಮಿಸೋಣ ಎಂದು ಮುಗಿಯುವ ಈ ವಿಡಿಯೋ, ಯೂಟ್ಯೂಬ್​ನ ಕೆಆರ್​ಜಿ ಕನೆಕ್ಟ್ಸ್​ ಚಾನಲ್​ನಲ್ಲಿ ಬಿಡುಗಡೆಯಾಗಿದ್ದು, ನೋಡುಗರನ್ನು ಭಾವನಾತ್ಮಕವಾಗಿ ಸೆಳೆಯುತ್ತಿದೆ.

ಇದನ್ನು ನೋಡಿರುವ ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್​ ಸಹ ತಮಗೆ ಅಳು ತಡೆಯಲಾಗುತ್ತಿಲ್ಲ ಎನ್ನುವುದರ ಜತೆಗೆ, ಬನ್ನಿ ಸಿನಿಮಾ ಸಂಭ್ರಮಿಸೋಣ ಎಂದು ಹೇಳಿದ್ದಾರೆ.