ಗುಂಟೂರು ಕಾರಂ ಚಿತ್ರದ ಕುರ್ಚಿ ಮಡತಪೆಟ್ಟಿ ಹಾಡಿಗೆ ಸ್ಫೂರ್ತಿಯಾಗಿದ್ದ ಕುರ್ಚಿ ತಾತಾ ಬಿಸಿಲಿನ ಹೊಡೆತಕ್ಕೆ ಬಲಿ! Kurchi Madathapetti  
ಸಿನಿವಾಣಿ

ಗುಂಟೂರು ಕಾರಂ ಚಿತ್ರದ ಕುರ್ಚಿ ಮಡತಪೆಟ್ಟಿ ಹಾಡಿಗೆ ಸ್ಫೂರ್ತಿಯಾಗಿದ್ದ ಕುರ್ಚಿ ತಾತಾ ಬಿಸಿಲಿನ ಹೊಡೆತಕ್ಕೆ ಬಲಿ! Kurchi Madathapetti

ಪ್ರಮುಖ ಮುಖ್ಯಾಂಶಗಳು

  • ಕುರ್ಚಿ ಮಡತಪೆಟ್ಟಿ ಡೈಲಾಗ್ ಖ್ಯಾತಿಯ ಮೊಹಮ್ಮದ್ ಕಲಾ ಬಾಷಾ (66) ಬುಧವಾರ ಸಂಜೆ ನಿಧನ
  • ಹೈದರಾಬಾದ್‌ನ ಪಾರ್ಕ್‌ನಲ್ಲಿ ವಾಕಿಂಗ್ ಮಾಡುವಾಗ ತೀವ್ರ ಬಿಸಿಲಿನ ಬೇಗೆಗೆ ತುತ್ತಾಗಿ ಸಾವು
  • ಬಸ್‌ಗಳಲ್ಲಿ ಭಿಕ್ಷೆ ಬೇಡುತ್ತಿದ್ದ ವಾರಂಗಲ್ ಮೂಲದ ಇವರು ಯೂಟ್ಯೂಬ್ ಸಂದರ್ಶನದಿಂದ ರಾತ್ರೋರಾತ್ರಿ ವೈರಲ್ ಆಗಿದ್ದರು
  • ಇವರ ಕುರ್ಚಿ ಮಡತಪೆಟ್ಟಿ ಡೈಲಾಗ್ ಅನ್ನು 'ಗುಂಟೂರು ಕಾರಂ' ಸಿನಿಮಾದ ಮಾಸ್ ಸಾಂಗ್‌ಗೆ ಬಳಸಲಾಗಿತ್ತು
Kurchi Madathapetti : ಒಂದೇ ಒಂದು ಡೈಲಾಗ್ ಮೂಲಕ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಹೊರಹೊಮ್ಮಿ, ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ‘ಗುಂಟೂರು ಕಾರಂ’ ಸಿನಿಮಾದ ಹಿಟ್ ಹಾಡಿಗೆ ಸ್ಫೂರ್ತಿಯಾಗಿದ್ದ 'ಕುರ್ಚಿ ತಾತಾ' ಖ್ಯಾತಿಯ ಮೊಹಮ್ಮದ್ ಕಲಾ ಬಾಷಾ (66) ಕೊನೆಯುಸಿರೆಳೆದಿದ್ದಾರೆ.
ಹೈದರಾಬಾದ್‌ನ ಕೃಷ್ಣಕಾಂತ್ ಪಾರ್ಕ್ ಪರಿಸರದಲ್ಲಿ ಹೆಚ್ಚಾಗಿ ಕಾಲ ಕಳೆಯುತ್ತಿದ್ದ ಅವರು, ಬುಧವಾರ ಸಾಯಂಕಾಲ ತೀವ್ರ ಅಸ್ವಸ್ಥತೆಯಿಂದ ವಿಧಿವಶರಾಗಿದ್ದಾರೆ. ಮಂಗಳವಾರ ಸಂಜೆ ಕೃಷ್ಣಕಾಂತ್ ಪಾರ್ಕ್‌ನಲ್ಲಿ ವಾಕಿಂಗ್ ಮಾಡುತ್ತಿದ್ದಾಗ ತೀವ್ರವಾದ ಬಿಸಿಲಿನ ಬೇಗೆ ಹಾಗೂ ಸನ್​ ಸ್ಟ್ರೋಕ್​ನಿಂದ ಹಠಾತ್ತನೆ ಕುಸಿದು ಬಿದ್ದಿದ್ದರು. ತಕ್ಷಣವೇ ಅಲ್ಲಿದ್ದವರು ಅವರಿಗೆ ಸಿಪಿಆರ್ (CPR) ಮಾಡಲು ಪ್ರಯತ್ನಿಸಿದರಾದರೂ ಯಾವುದೇ ಫಲ ಸಿಗಲಿಲ್ಲ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಅವರನ್ನು ಮನೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿದರಾದರೂ, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಸಂಜೆ ತಮ್ಮ ಪತ್ನಿಯ ಮಡಿಯಲ್ಲೇ ಕುರ್ಚಿ ತಾತ ಪ್ರಾಣ ಬಿಟ್ಟಿದ್ದಾರೆ. ಅವರ ‘ಕುರ್ಚಿ ಮಡತಪೆಟ್ಟಿ’ ಎಂಬ ಪ್ರಸಿದ್ಧ ಡೈಲಾಗ್ ಎಂದೆಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಜೀವಂತವಾಗಿರುತ್ತದೆ ಎಂದು ನೆಟ್ಟಿಗರು ಕಂಬನಿ ಮಿಡಿಯುತ್ತಿದ್ದಾರೆ.
ವಾರಂಗಲ್ ಜಿಲ್ಲೆಯ ಕರಿಮಾಬಾದ್ ಮೂಲದ ಮೊಹಮ್ಮದ್ ಪಾಷಾ ಬದುಕಿನ ಬಂಡಿ ಸಾಗಿಸಲು ಹೈದರಾಬಾದ್‌ಗೆ ವಲಸೆ ಬಂದಿದ್ದರು. ಅವರಿಗೆ ಪತ್ನಿ, ಮೂವರು ಗಂಡುಮಕ್ಕಳು ಹಾಗೂ ಒಬ್ಬಳು ಮಗಳಿದ್ದಾರೆ. ಬೊರಾಬಂಡಾ ಪ್ರದೇಶದಲ್ಲಿ ವಾಸಿಸುತ್ತಾ ಯುಸೂಫ್‌ಗುಡ ಮತ್ತು ಕೃಷ್ಣಕಾಂತ್ ಪಾರ್ಕ್ ಸುತ್ತಮುತ್ತ ಬಸ್‌ಗಳಲ್ಲಿ ಇಂಗ್ಲಿಷ್ ಮಾತನಾಡುತ್ತಾ, ಭಿಕ್ಷೆ ಬೇಡುತ್ತಿದ್ದರು. ಇವರ ಜೀವನ ರಸ್ತೆಯಲ್ಲೇ ಕಳೆಯುತ್ತಿತ್ತು.
ಈ ನಡುವೆ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ತಮ್ಮ ಕುಟುಂಬದ ಜಗಳವನ್ನು ವಿವರಿಸುವಾಗ ಅವರು ಸಿಟ್ಟಿನಿಂದ ಹೇಳಿದ "ಕುರ್ಚಿ ಮಡತಪೆಟ್ಟಿ" (ಆ ಕುರ್ಚಿಯನ್ನು ಮಡಚಿ) ಎಂಬ ಒಂದೇ ಒಂದು ಡೈಲಾಗ್ ಮೀಮ್ಸ್ ಮತ್ತು ರೀಲ್ಸ್ ಕ್ರಿಯೇಟರ್ಸ್‌ಗಳ ಮೂಲಕ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿ, ರಾತ್ರೋರಾತ್ರಿ ಅವರನ್ನು "ಕುರ್ಚಿ ತಾತ" ಎಂಬ ಸೆಲೆಬ್ರಿಟಿಯನ್ನಾಗಿ ಮಾಡಿತು.
ಈ ಕ್ರೇಜ್ ಎಷ್ಟಿತ್ತೆಂದರೆ ನಿರ್ದೇಶಕ ತ್ರಿವಿಕ್ರಮ್ ಮತ್ತು ಸಂಗೀತ ನಿರ್ದೇಶಕ ತಮನ್ ಈ ಡೈಲಾಗ್ ಅನ್ನು ಮಹೇಶ್ ಬಾಬು ನಟನೆಯ 'ಗುಂಟೂರು ಕಾರಂ' ಸಿನಿಮಾದ ಮಾಸ್ ಹಾಡಿಗೆ ಬಳಸಿ ಜಾಗತಿಕ ಮಟ್ಟದಲ್ಲಿ ಸನ್ಸೇಷನ್ ಸೃಷ್ಟಿಸಿದರು. ಆ ಸಮಯದಲ್ಲಿ ಚಿತ್ರತಂಡದಿಂದ ಹಾಗೂ ಕೆಲವು ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳಿಂದ ಕುರ್ಚಿ ತಾತನಿಗೆ ಆರ್ಥಿಕ ಸಹಾಯವೂ ಸಿಕ್ಕಿತ್ತು. ಆದರೆ, ಡಿಜಿಟಲ್ ಲೋಕದ ಕ್ರೇಜ್ ಶಾಶ್ವತವಾಗಿರಲಿಲ್ಲ, ಕೆಲವು ವರ್ಷಗಳ ನಂತರ ಯೂಟ್ಯೂಬ್ ಚಾನೆಲ್‌ಗಳು ಇವರನ್ನು ಮರೆತವು.
ಸಂದರ್ಶನಗಳಿಂದ ಬಂದ ಹಣವೂ ಕರಗಿಹೋಯಿತು. ವಯೋಸಹಜ ಆರೋಗ್ಯ ಸಮಸ್ಯೆಗಳು ಮತ್ತು ಮದ್ಯದ ವ್ಯಸನದಿಂದಾಗಿ ಅವರ ಜೀವನ ಮತ್ತೆ ದುಸ್ತರವಾಯಿತು. ಈ ಹಿಂದೆ ಅವರು ಮೃತಪಟ್ಟಿದ್ದಾರೆ ಎಂಬ ವದಂತಿಗಳು ಹರಡಿದಾಗ ತಾವೇ ಮಾಧ್ಯಮಗಳ ಮುಂದೆ ಬಂದು ಅದನ್ನು ನಿರಾಕರಿಸಿದ್ದರು. ಆದರೆ, ಇತ್ತೀಚಿನ ತೀವ್ರ ಬೇಸಿಗೆಯ ಬಿಸಿಲಿನ ತಾಪಕ್ಕೆ ತುತ್ತಾದ ಈ ತಾತ, ಚಿಕಿತ್ಸೆ ಫಲಿಸದೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ, (ಏಜೆನ್ಸೀಸ್​).