ಚೆನ್ನೈ: ತಮಿಳು ಸ್ಟಾರ್ ನಟ ವಿಜಯ್ ಮತ್ತು ವಿಜಯ್ ಸೇತುಪತಿ ನಟಿಸಿರುವ ಮಾಸ್ಟರ್ ಸಿನಿಮಾ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಬೇಕಿತ್ತು. ಅದಾದ ಬಳಿಕ ದೀಪಾವಳಿ, ಕ್ರಿಸ್ಮಸ್ ಹೀಗೆ ಬಗೆಬಗೆ ಹಲವು ದಿನಾಂಕಗಳು ಅದಲುಬದಲಾದವು. ಇದೀಗ ಕೊನೆಗೂ ಚಿತ್ರತಂಡ ಅಧಿಕೃತವಾಗಿ ಸಿನಿಮಾ ಬಿಡುಗಡೆಗೆ ದಿನಾಂಕವನ್ನು ಘೋಷಣೆ ಮಾಡಿದೆ.
ಹೌದು. ಲೋಕೇಶ್ ಕಣಗರಾಜ್ ನಿರ್ದೇಶನದ ಮಾಸ್ಟರ್ ಸಿನಿಮಾ ಪೊಂಗಲ್ ಪ್ರಯುಕ್ತ ಜ. 13ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಈವರೆಗೂ ಸಣ್ಣಪುಟ್ಟ ಸಿನಿಮಾಗಳು ರಿಲೀಸ್ ಆಗಿದ್ದರೂ, ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಆ ಸಿನಿಮಾಗಳು ಸೋತಿದ್ದವು. ಇದೀಗ ಕಾಲಿವುಡ್ನಲ್ಲಿ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿರುವ ಮಾಸ್ಟರ್ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಸಾಹಸಕ್ಕಿಳಿದಿದೆ.
ಈ ಮೊದಲು ಈ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ತೆರೆಕಾಣಲಿದೆ ಎಂದೇ ಹೇಳಲಾಗಿತ್ತು. ಆದರೆ, ಇದೀಗ ಅಧಿಕೃತ ಬಿಡುಗಡೆ ಪೋಸ್ಟರ್ ರಿಲೀಸ್ ಆಗಿದ್ದು, ಅದರಲ್ಲಿ ತೆಲುಗು ಮತ್ತು ಹಿಂದಿಗಷ್ಟೇ ಪ್ರಾಮುಖ್ಯತೆ ನೀಡಲಾಗಿದೆ. ಈ ನಡುವೆ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ತಮಿಳುನಾಡು ಸಿಎಂ ಜತೆಗೂ ತಂಡ ಭೇಟಿಯಾಗಿ ಮಾತುಕತೆ ನಡೆಸಿದೆಯಂತೆ. ಶೇ. 50ರಷ್ಟಿರುವ ಆಸನದ ವ್ಯವಸ್ಥೆಯನ್ನು ಶೇ. 100 ಮಾಡುವಂತೆ ಬೇಡಿಕೆ ಇಟ್ಟಿದ್ದಾರಂತೆ.
ಒಟ್ಟಿನಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಬಜೆಟ್ನ ಸಿನಿಮಾವೊಂದು ಕರೊನಾ ಬಳಿಕ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. ಈ ಸಿನಿಮಾ ಬಳಿಕ ಅದ್ಯಾವ ರೀತಿ ಬೇರೆ ಬೇರೆ ಸಿನಿಮಾಗಳ ಆಗಮನವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ. (ಏಜೆನ್ಸೀಸ್)