ಸಿನಿವಾಣಿ

ಅಂತಹ ಮೈಂಡ್​ಲೆಸ್​ ಚಿತ್ರ ನೋಡುವುದಿಲ್ಲ … 'ಕೆಜಿಎಫ್​ 2' ಬಗ್ಗೆ ಕಿಶೋರ್​ ಮಾತು

chetannadiger

ಬೆಂಗಳೂರು: ಇತ್ತೀಚೆಗಷ್ಟೇ ಟ್ವಿಟರ್​ ಖಾತೆ ಸಸ್ಪೆಂಡ್​ ಆದ ಹಿನ್ನೆಲೆಯಲ್ಲಿ ಸುದ್ದಿಯಲ್ಲಿದ್ದರು ನಟ ಕಿಶೋರ್​. ಆ ನಂತರ ತನ್ನ ಖಾತೆಯು ವಿವಾದಿತ ಟ್ವೀಟ್​ಗಳಿಂದ ಸಸ್ಪೆಂಡ್​ ಆಗಿಲ್ಲ, ಹ್ಯಾಕ್​ ಆಗಿದ್ದರಿಂದ ಮುಂದಾಗುವ ತೊಂದರೆಗಳನ್ನು ತಪ್ಪಿಸುವುದಕ್ಕೆ ಸಸ್ಪೆಂಡ್​ ಮಾಡಲಾಗಿದೆ ಎಂದು ಹೇಳುವ ಮೂಲಕ ಪ್ರಕರಣವನ್ನು ತಿಳಿಗೊಳಿಸಿದ್ದರು.

ಈಗ ಅವರ ಹೇಳಿಕೆಯೊಂದು ವಿವಾದಕ್ಕೆ ತಿರುಗಿದೆ. 'ಕೆಜಿಎಫ್​ 2' ಚಿತ್ರದ ಬಗ್ಗೆ ಕಿಶೋರ್​ ಆಡಿರುವ ಮಾತುಗಳು ಯಶ್​ ಅಭಿಮಾನಿಗಳನ್ನು ಕೆರಳಿಸಿದೆ. ಇಷ್ಟಕ್ಕೂ ಆಗಿದ್ದೇನೆಂದರೆ, 'ಕೆಜಿಎಫ್​ 2' ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ತಾನು ಅಂತಹ ಮೈಂಡ್​ಲೆಸ್​ ಚಿತ್ರವನ್ನು ನೋಡುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ನಾನು ಆ ಚಿತ್ರವನ್ನು ನೋಡಿಲ್ಲ. ಅಂತಹ ಮೈಂಡ್​ಲೆಸ್​ ಸಿನಿಮಾಗಳನ್ನು ನೋಡುವುದಕ್ಕಿಂತ ಸಣ್ಣ ಅಥವಾ ಅಷ್ಟೇನೂ ಯಶಸ್ವಿಯಲ್ಲದ ಚಿತ್ರಗಳನ್ನು ನೋಡುವುದಕ್ಕೆ ಇಷ್ಟಪಡುತ್ತೇನೆ' ಎಂದು ಹೇಳಿಕೊಂಡಿದ್ದಾರೆ. ಈ ಮಾತು ಕೇಳಿ ಯಶ್​ ಅಭಿಮಾನಿಗಳು ಸಹಜವಾಗಿಯೇ ಸಿಟ್ಟಾಗಿದ್ದಾರೆ.

ಇಷ್ಟಕ್ಕೂ ಕಿಶೋರ್​ ಹೀಗೆ ಮಾತನಾಡಿದ್ದೆಲ್ಲಿ ಅಥವಾ ಉತ್ತರಿಸಿದ್ದು ಯಾರಿಗೆ? ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಆದರೆ, ಅವರ ಮಾತುಗಳ ಬಗೆ ಸೋಷಿಯಲ್​ ಮೀಡಿಯದಲ್ಲಿ ಚರ್ಚೆಯಂತೂ ಜೋರಾಗಿದೆ.