ಸಿನಿವಾಣಿ

'ಡಿಯರ್ ಕಣ್ಮಣಿ' ಮೂಲಕ ಹೀರೋ ಆದ 'ಬಿಗ್​ ಬಾಸ್​' ಕಿಶನ್​

ಬೆಂಗಳೂರು: 'ಬಿಗ್​ ಬಾಸ್​'ನ ಏಳನೇ ಸೀಸನ್​ ಮೂಲಕ ಸಾಕಷ್ಟು ಜನಪ್ರಿಯವಾಗಿದ್ದ ಡ್ಯಾನ್ಸರ್​ ಕಿಶನ್​ ಬೆಳಗಲಿ, ಇದೀಗ 'ಡಿಯರ್ ಕಣ್ಮಣಿ' ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಈ ಚಿತ್ರವನ್ನು ವಿಸ್ಮಯಾ ಗೌಡ ಎನ್ನುವವರು ನಿರ್ಮಿಸಿ-ನಿರ್ದೇಶಿಸುತ್ತಿದ್ದು, ಇತ್ತೀಚೆಗೆ ಗುಟ್ಟೆ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. 'ಕಿಚ್ಚ' ಸುದೀಪ ಚಿತ್ರದ ಮುಹೂರ್ತಕ್ಕೆ ಆಗಮಿಸಿ ಮೊದಲ ದೃಶ್ಯಕ್ಕೆ ಕ್ಲಾಪ್​ ಮಾಡುವುದರ ಜತೆಗೆ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ.

'ಡಿಯರ್​ ಕಣ್ಮಣಿ' ಒಂದು ಪ್ರೇಮಕಥೆಯಾಗಿದ್ದು, ಕಿಶನ್​ ನಾಯಕನಾಗಿ ನಟಿಸಿದರೆ, ಸಾತ್ವಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಾತ್ವಿಕಾ ಯಾರು ಎಂಬ ಪ್ರಶ್ನೆ ಬರುವುದು ಸಹಜ. ಈ ಹಿಂದೆ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ಓಂಪ್ರಕಾಶ್​ ರಾವ್ ಮತ್ತು ರೇಖಾ ದಾಸ್​ ಅವರ ಮಗಳು ಶ್ರಾವ್ಯಾ, ಈಗ ಸಾತ್ವಿಕಾ ಎಂದು ಹೆಸರು ಬದಲಾಯಿಸಿಕೊಂಡು, ಈ ಚಿತ್ರದ ಮೂಲಕ ರೀಎಂಟ್ರಿ ಕೊಡುತ್ತಿದ್ದಾರೆ. ಇವರಿಬ್ಬರ ಜತೆಗೆ ಕ್ರಿಕೆಟಿಗ ಪ್ರವೀಣ್​ ಸಹ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ ಎಂದ ಕಿಶನ್​, 'ಲವರ್ ಬಾಯ್ ಪಾತ್ರ ನನಗೆ ಹೊಂದುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಇದನ್ನು ತೆರೆಮೇಲೆ ಸಾಧ್ಯವಾಗಿಸಬೇಕಿದೆ ಎನ್ನುತ್ತಾರೆ. ಸಾತ್ವಿಕಾ ಮಾತನಾಡಿ, 'ನನಗೂ ಈ ಸಿನಿಮಾದಲ್ಲಿ ವಿಭಿನ್ನವಾದ ಪಾತ್ರವೊಂದರಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಲವರ್ ಬಾಯ್ ಜೊತೆ ರೊಮ್ಯಾನ್ಸ್ ಮಾಡುವ ದೃಶ್ಯಗಳಲ್ಲಿ ಅಭಿನಯಿಸಲು ಸಿದ್ಧಳಾಗಿದ್ದೇನೆ. ಇದು ಎಲ್ಲರ ಕನಸಿನ ಸಿನಿಮಾ. ನನಗೂ ಇದು ವೃತ್ತಿಜೀವನದಲ್ಲಿ ಬೇರೆ ರೀತಿಯಲ್ಲಿ ಬೆಳೆಯಲು ಸಹಾಯ ಆಗಲಿದೆ' ಎಂದು ಅಭಿಪ್ರಾಯಪಡುತ್ತಾರೆ.

ಮೂವರು ಇದ್ದ ಮಾತ್ರಕ್ಕೆ ಇದೊಂದು ತ್ರಿಕೋಣ ಪ್ರೇಮಕಥೆ ಎಂದು ಭಾವಿಸಬೇಕಿಲ್ಲ ಎನ್ನುವ ನಿರ್ದೇಶಕಿ ವಿಸ್ಮಯಾ ಗೌಡ, 'ಮಡಿಕೇರಿ ಹಾಗೂ ಮೈಸೂರಿನಲ್ಲಿ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದೆ. ಇದೊಂದು ಲವ್​ಸ್ಟೋರಿ. ಇದು ಪಕ್ಕಾ ಫ್ಯಾಮಿಲಿ ಎಂಟರ್‍ಟೈನರ್. ತುಂಬಾ ಚೆಂದದ ಕಥೆ ಮಾಡಿಕೊಂಡಿದ್ದೇವೆ ಎಂಬ ವಿಶ್ವಾಸ ನನಗಿದೆ. ನಾವೆಲ್ಲರೂ ಸ್ನೇಹಿತರೇ ಆದರೂ ಸ್ಕ್ರಿಪ್ಟ್ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ.

ಚಿತ್ರಕ್ಕೆ ಕ್ಲಾಪ್​ ಮಾಡಿದ ಸುದೀಪ್​, 'ಈ ಚಿತ್ರದಲ್ಲಿ ಪ್ರವೀಣ್ ಗೌಡ ನಟನೆ ಮಾಡುತ್ತಿದ್ದಾರೆ. ಅವರಿಗೋಸ್ಕರ ನಾನು ಈ ಕಾರ್ಯಕ್ರಮಕ್ಕೆ ಬಂದೆ. ವಿಸ್ಮಯಾ ಹಾಗೂ ಅವರ ತಂಡ ತುಂಬಾ ಶ್ರಮವಹಿಸಿ ಕೆಲಸ ಮಾಡುತ್ತಿದೆ. ಖಂಡಿತಾ ನಾನು ಇಲ್ಲಿ ಯಾರಿಗೂ ನನ್ನ ಅನುಭವ ಹೇಳಿ ಮಾರ್ಗದರ್ಶನ ಮಾಡುವ ಉದ್ದೇಶದಿಂದ ಬಂದಿಲ್ಲ. ಅವರು ತಪ್ಪುಗಳನ್ನು ಮಾಡಲಿ, ಕಲಿತುಕೊಂಡು ಒಳ್ಳೆಯ ಸಿನಿಮಾ ಮಾಡಲಿ ಎಂದು ಹಾರೈಸುತ್ತೇನೆ' ಎಂದರು.

'ಡಿಯರ್​ ಕಣ್ಮಣಿ' ಚಿತ್ರಕ್ಕೆ ವಾಸುಕಿ ವೈಭವ್​ ಸಂಗೀತ ಸಂಯೋಜಿಸುತ್ತಿದ್ದಾರೆ. ಮಧುಸೂಧನ್​ ಛಾಯಾಗ್ರಹಣ ಮಾಡುತ್ತಿದ್ದು, ವಿಸ್ಮಯಾ ಮತ್ತು ರಾಜು ವೈವಿಧ್ಯ ಜತೆಯಾಗಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ.