ಬೆಂಗಳೂರು: ಸ್ಯಾಂಡಲ್ವುಡ್ನ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್ ಆಟದ ಮೇಲಿರುವ ವಿಶೇಷ ಪ್ರೀತಿಯ ಬಗ್ಗೆ ಹೆಚ್ಚು ತಿಳಿಸಬೇಕಿಲ್ಲ. ಯಾಕೆಂದರೆ, ಸಿಸಿಎಲ್ನಲ್ಲಿ ಕರ್ನಾಟಕ ತಂಡದ ನಾಯಕರಾಗಿ ಅವರು ಜವಾಬ್ದಾರಿ ನಿರ್ವಹಿಸಿದ್ದರು. ಈ ಹಿಂದೆ ಐಪಿಎಲ್ ದುಬೈನಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ತೆರಳಿ ಕಿಚ್ಚ ಹಲವು ಪಂದ್ಯಗಳನ್ನು ವೀಕ್ಷಿಸಿದ್ದರು.
ಇದೀಗ, ಭಾರತ ಹಾಗೂ ಶ್ರೀಲಂಕಾ ನಡುವೆ ಬೆಂಗಳೂರಿನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ಗೆ ನಟ ಕಿಚ್ಚ ಸುದೀಪ್ ಹಾಜರಾಗಿದ್ದಾರೆ. ಹೌದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ Vs ಶ್ರೀಲಂಕಾ 2ನೇ ಟೆಸ್ಟ್ ಅನ್ನು ವೀಕ್ಷಿಸಿದ್ದಾರೆ ಕಿಚ್ಚ ಸುದೀಪ್. ಪಂದ್ಯವನ್ನು ವೀಕ್ಷಿಸಿ ಅದರ ಜತೆಗೆ ಭಾರತ ತಂಡವನ್ನು ಹುರಿದುಂಬಿಸಿದ್ದಾರೆ ಕಿಚ್ಚ.
ಇನ್ನು, ನೆಚ್ಚಿನ ನಟನನ್ನು ಸ್ಟೇಡಿಯಂನಲ್ಲಿ ಹಾಗೂ ಟಿವಿ ಸ್ಕ್ರೀನ್ನಲ್ಲಿಯೂ ನೋಡಿ ಕಿಚ್ಚನ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಇನ್ನು, ಇಲ್ಲಿ ವಿಶೇಷವೆಂದರೆ ಕ್ರೀಡಾಂಗಣದಲ್ಲಿ ಅಭಿಮಾನಿಗಳೊಂದಿಗೆ ಪುನೀತ್ ಅವರ ಫೋಟೋ ಜತೆ ಸುದೀಪ್ ಕೂಡಾ ಪೋಸ್ ನೀಡಿದ್ದಾರೆ. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.