ಸಿನಿವಾಣಿ

'ಭೀಮ್ಲಾ ನಾಯಕ್'ನಲ್ಲಿ ಸುದೀಪ್ ನಟಿಸದಿರುವುದು ಒಳ್ಳೇದಾಯ್ತು ಎಂದ ಅಭಿಮಾನಿಗಳು! ಕಾರಣ?

ತೆಲುಗಿನ ಪವರ್ ಸ್ಟಾರ್ ನಟ ಪವನ್ ಕಲ್ಯಾಣ್ ಮತ್ತೆ ಬೆಳ್ಳಿ ತೆರೆಯ ಮೇಲೆ 'ಭೀಮ್ಲಾ ನಾಯಕ್' ಚಿತ್ರದಿಂದ ಫೆಬ್ರವರಿ 25 ರಿಂದ ಮಿಂಚಲು ರೆಡಿಯಾಗಿದ್ದಾರೆ. ಹೆಚ್ಚು ಕಡಿಮೆ 3 ವರ್ಷಗಳು ಚಿತ್ರರಂಗದಿಂದ ಪವನ್ ಕಲ್ಯಾಣ್ ದೂರ ಉಳಿದಿದ್ದರು. ನಂತರ 'ವಕೀಲ್ ಸಾಬ್' ಚಿತ್ರದ ಮೂಲಕ ತೆರೆಯ ಮೇಲೆ ಅಬ್ಬರಿಸಿದ್ದು, ಇದೀಗ, 'ಭೀಮ್ಲಾ ನಾಯಕ್' ಮೂಲಕ ಮತ್ತೆ ಸಿನಿಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ಫೆಬ್ರವರಿ 21 ರಂದು ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದರಲ್ಲಿಯೂ, ಚಿತ್ರದ ಟ್ರೈಲರ್ ನಮ್ಮ ಕನ್ನಡದ ನಟ ಕಿಚ್ಚ ಸುದೀಪ್ ಅಭಿಮಾನಿಗಳಿಗೂ ಸಂತಸ ತಂದಿದೆ. ಯಾಕೆ ಅಂತೀರಾ...?
ಅಂದಹಾಗೆ, 'ಭೀಮ್ಲಾ ನಾಯಕ್' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಜತೆಗೆ ಕೆಲವು ನೆಗೆಟಿವ್ ಕಾಮೆಂಟ್​ಗಳನ್ನು ಗಿಟ್ಟಿಸಿಕೊಂಡಿದೆ. ಆದರೆ, 'ಭೀಮ್ಲ ನಾಯಕ್' ಚಿತ್ರದ ಟ್ರೇಲರ್ ನೋಡಿದ ನಟ ಕಿಚ್ಚ ಸುದೀಪ್ ಅಭಿಮಾನಿಗಳು ಮಾತ್ರ ದಿಲ್ ಖುಷ್ ಆಗಿದ್ದಾರಂತೆ. ಇದಕ್ಕೆ, ಕಾರಣ ಇದೆ. ಹೌದು, 'ಭೀಮ್ಲ ನಾಯಕ್' ಚಿತ್ರದಲ್ಲಿ ಪವನ್ ಅವರ ಜೊತೆಗೆ ನಟ ರಾಣಾ ದಗ್ಗುಬಾಟಿ ಎದುರಾಳಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಅಸಲಿಗೆ ಈ ಪಾತ್ರದಲ್ಲಿ ನಟ ಕಿಚ್ಚ ಸುದೀಪ್ ಅವರು ಅಭಿನಯಿಸಬೇಕಿತ್ತು. ಆದರೆ, ಸುದೀಪ್ ಈ ಸಿನಿಮಾದಿಂದ ಹಲವು ಕಾರಣಗಳಿಂದ ದೂರ ಉಳಿದರು.

ಸುದೀಪ್ 'ಭೀಮ್ಲ ನಾಯಕ್' ಚಿತ್ರದಲ್ಲಿ ನಟಿಸದಿರಲು ಕಾರಣಗಳು:

'ಭೀಮ್ಲಾ ನಾಯಕ್' ಚಿತ್ರವನ್ನು ಸುದೀಪ್ ಅದರ ಕಥೆಯ ಕಾರಣಕ್ಕೆ ಕೈಬಿಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೇ, 'ಭೀಮ್ಲಾ ನಾಯಕ್' ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿಯೇ ಸುದೀಪ್ 'ವಿಕ್ರಾಂತ್ ರೋಣ' ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದರು. ಜೊತೆಗೆ, ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸಹ ತೊಡಗಿಸಿಕೊಂಡಿದ್ದರು. ಇನ್ನು, ಸದ್ಯ 'ಭೀಮ್ಲಾ ನಾಯಕ್' ಟ್ರೈಲರ್ ಕಂಡ ಕಿಚ್ಚ ಸುದೀಪ್ ಅಭಿಮಾನಿಗಳು ಸುದೀಪ್ 'ಭೀಮ್ಲಾ ನಾಯಕ್' ಚಿತ್ರವನ್ನು ಒಪ್ಪಿಕೊಂಡಿದ್ದಿದ್ದರೆ ಸುದೀಪ್‌ರ ಹೀರೋ ಇಮೇಜಿಗೆ ಧಕ್ಕೆ ಆಗುವ ಸಾಧ್ಯತೆ ಇತ್ತು ಎಂಬ ಭಾವನೆಯಲ್ಲಿದ್ದಾರೆ. ಹಾಗಾಗಿ, ಟ್ರೈಲರ್ ನೋಡಿದ ಸುದೀಪ್ ಅಭಿಮಾನಿಗಳು, ನಟ ರಾಣಾ ಅವರ ಪಾತ್ರ ಕಂಡು ಆ ಸಿನಿಮಾದಲ್ಲಿ, ಅದರಲ್ಲಿಯೂ ರಾಣಾ ಪಾತ್ರದಲ್ಲಿ ಕಿಚ್ಚ ನಟಿಸದಿರುವುದು ಒಳ್ಳೆಯದಾಯಿತು ಎಂದುಕೊಳ್ಳುತ್ತಿದ್ದಾರೆ. ಭೀಮ್ಲಾ ನಾಯಕ್' ಸಿನಿಮಾ ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ಆಗಿದ್ದು, ಒಬ್ಬ ಪೊಲೀಸ್ ಅಧಿಕಾರಿ ಹಾಗೂ ಒಬ್ಬ ಮಾಜಿ ಸೈನಿಕನ ನಡುವೆ ನಡೆವ ಕದನದ ಕಥೆಯಾಗಿದೆ.
'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದಲ್ಲಿ ಇಬ್ಬರು ನಾಯಕ ಪಾತ್ರಧಾರಿಗಳಿಗೆ ಸಮಾನ ಅವಕಾಶ, ಸಮಾನ ಗೌರವ ಇರುತ್ತದೆ ಎಂಬುದು ಮಲಯಾಳಂ ಸಿನಿಮಾ ನೋಡಿದರೆ ಗೊತ್ತಾಗುತ್ತೆ. ಆದರೆ 'ಭೀಮ್ಲಾ ನಾಯಕ್' ಸಿನಿಮಾದಲ್ಲಿ ಹಾಗಿಲ್ಲ. 'ಭೀಮ್ಲಾ ನಾಯಕ್' ಸಿನಿಮಾ ಸಂಪೂರ್ಣವಾಗಿ ಪವನ್​ರ ಪಾತ್ರದ ಮೇಲಷ್ಟೆ ಕೇಂದ್ರೀಕೃತಗೊಂಡಿದೆ ಅಂತ ಟ್ರೈಲರ್ ನೋಡಿದವರಿಗೆ ಅನಿಸುತ್ತಿದೆ. ರಾಣಾ ದಗ್ಗುಬಾಟಿ ಪಾತ್ರವನ್ನು 'ಡಮ್ಮಿ' ಮಾಡಲಾಗಿದೆ. ಪವನ್‌ ಹೀರೋಯಿಸಂ ತೋರಿಸಲು ರಾಣಾರ ಪಾತ್ರವನ್ನು ಬಳಸಿಕೊಳ್ಳಲಾಗಿರುವುದು ಟ್ರೇಲರ್‌ನಿಂದಲೇ ಗೊತ್ತಾಗುತ್ತಿದೆ ಎಂಬುದು ಸುದೀಪ್ ಅಭಿಮಾನಿಗಳ ವಾದ. ಹಾಗಾಗಿ, ಸುದೀಪ್ ಈ ಸಿನಿಮಾದಲ್ಲಿ ನಟಿಸಿದ್ದರೆ ಅವರ ಪಾತ್ರ ಡಮ್ಮಿ ಆಗಿರುತ್ತಿತ್ತು. ಹೀಗಾಗಿ, ಕಿಚ್ಚ ಸುದೀಪ್ ಈ ಸಿನಿಮಾದಲ್ಲಿ ನಟಿಸದಿರುವುದು ಒಳ್ಳೆಯದಾಗಿದೆ ಎಂದು ಖುಷಿ ವ್ಯಕ್ತಪಡಿಸುತ್ತಿದ್ದಾರಂತೆ.