ಸಿನಿವಾಣಿ

ಶಿವಣ್ಣನ ಮಹೋತ್ಸವಕ್ಕೆ ಕಿಚ್ಚ ಸುದೀಪ್​ ಸಾಥ್​

ಇತ್ತೀಚಿನ ದಿನಗಳಲ್ಲಿ ಸಿನಿಮಾ ಸ್ಟಾರ್​ಗಳ ಜನ್ಮದಿನ ಬಂತೆಂದರೆ ಸಾಕು ಅಭಿಮಾನಿಗಳು ಹಬ್ಬದಂತೆ ಆಚರಿಸಲು ಸಜ್ಜಾಗುತ್ತಾರೆ. ಬಗೆ ಬಗೆ ಕಾಮನ್​ ಡಿಸ್ಪ್ಲೆ ಪಿಕ್ಚರ್​ ಸಿದ್ಧಪಡಿಸಿ ಅದನ್ನು ಬೇರೆ ತಾರೆಗಳಿಂದ ಬಿಡುಗಡೆ ಮಾಡಿಸಿ ಸಂಭ್ರಮಿಸುತ್ತಾರೆ. ಆ ಪರಿಪಾಠ ಸ್ಯಾಂಡಲ್​ವುಡ್​ನಲ್ಲಿಯೂ ಮುಂದುವರಿದಿದೆ. ಇದೀಗ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಜನ್ಮದಿನದ ಪ್ರಯುಕ್ತ ವಿಶೇಷವಾದ ಸಿಡಿಪಿ ಬಿಡುಗಡೆಯಾಗಿದೆ.

ಶಿವಣ್ಣನ ಮಹೋತ್ಸವ ಹೆಸರಿನಲ್ಲಿ ಈಗಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಟ್ರೆಂಡ್ ಆಗುತ್ತಿರುವ ಸಿಡಿಪಿಗಳನ್ನು ಅವರ ಅಭಿಮಾನಿಗಳು ಡಿಪಿ ಇಟ್ಟುಕೊಂಡು ಸಂಭ್ರಮಿಸುತ್ತಿದ್ದಾರೆ. ಹೀಗಿರುವಾಗಲೇ ಕಿಚ್ಚ ಸುದೀಪ್​ ಶಿವಣ್ಣನ ಸಿಡಿಪಿ ಪೋಸ್ಟರ್​ ಬಿಡುಗಡೆ ಮಾಡಿ ಮುಂಚಿತವಾಗಿ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ಇನ್ನು ಜನ್ಮದಿನದ ನಿಮಿತ್ತ, ಈ ವರ್ಷದ ಹುಟ್ಟುಹಬ್ಬದ ಆಚರಣೆಗೆ ಶಿವಣ್ಣ ಬ್ರೇಕ್​ ಹಾಕಿದ್ದು, ವಿಡಿಯೋ ಮೂಲಕ ಈಗಾಗಲೇ ಅಭಿಮಾನಿಗಳಿಗೆ ವಿಷಯ ತಲುಪಿಸಿದ್ದಾರೆ. -‘ಎಲ್ಲರಿಗೂ ನಮಸ್ಕಾರ, ನೀವೆಲ್ಲರೂ ಆರೋಗ್ಯವಾಗಿ ಚೆನ್ನಾಗಿದ್ದೀರಿ ಎಂದುಕೊಂಡಿದ್ದೇನೆ. ನಾನು ಕೂಡ ಆರೋಗ್ಯವಾಗಿದ್ದೀನಿ, ನೀವು ಚೆನ್ನಾಗಿರಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಈ ತಿಂಗಳು ನನ್ನ ಜನ್ಮದಿನವಿದೆ. ಆವತ್ತು ನಾನು ಮನೆಯಲ್ಲಿ ಇರಲ್ಲ. ಯಾಕೆಂದರೆ ಇಂತಹ ಸಂದರ್ಭದಲ್ಲಿ ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ಮುಖ್ಯ. ಆವತ್ತು ನೀವೆಲ್ಲರೂ ಮನೆಯ ಬಳಿ ಬಂದರೆ ಸಾಮಾಜಿಕ ಅಂತರ ಕಾಪಾಡಲು ಕಷ್ಟವಾಗುತ್ತದೆ. ಇದರಿಂದ ನಿಮ್ಮೆಲ್ಲರಿಗೂ ನೋವಾಗುತ್ತದೆ ಎಂದು ನನಗೆ ಗೊತ್ತು. ನನಗೂ ಅಷ್ಟೆ ನೋವಾಗುತ್ತೆ. ಆದರೆ ಈ ಹುಟ್ಟುಹಬ್ಬದಲ್ಲಿ ನನ್ನ ಆರೋಗ್ಯಕ್ಕಿಂತ, ನಿಮ್ಮ ಆರೋಗ್ಯ ಮುಖ್ಯ. ಹೀಗಾಗಿ ನೀವೆಲ್ಲರೂ ನಿಮ್ಮ ಆರೋಗ್ಯ ನೋಡಿಕೊಳ್ಳಲಿ‘ ಎಂದು ಮನವಿ ಮಾಡಿದ್ದಾರೆ.