ಬೆಂಗಳೂರು: ಧ್ರುವ ಸರ್ಜಾ ನಟನೆಯ ‘ಪೊಗರು’ ಬಹುದಿನಗಳ ಬಳಿಕ ಅಭಿಮಾನಿಗಳಿಗೆ ಚಿತ್ರದಲ್ಲಿನ ಹಾಡಿನ ಝುಲಕ್ ತೋರಿಸಲು ಆಗಮಿಸುತ್ತಿದೆ. ಪೋಸ್ಟರ್ ಮತ್ತು ಡೈಲಾಗ್ ಟೀಸರ್ ಆದ ಮೇಲೆ ಬೇರಾವ ಗುಟ್ಟನ್ನೂ ಬಿಟ್ಟುಕೊಡದ ಚಿತ್ರತಂಡ, ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ಈಗ ಬಿಡುಗಡೆಗೆ ತಯಾರಿ ನಡೆಸಿದೆ.
ಆ ಪ್ರಯುಕ್ತ ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡಿರುವ ‘ಖರಾಬು..’ ಹೆಸರಿನ ಹಾಡನ್ನು ಬಿಡುಗಡೆ ಮಾಡಿಕೊಳ್ಳಲಿದೆ. ಅಂದಹಾಗೆ, ಮಾ. 27ರಂದು ಹಾಡು ರಿಲೀಸ್ ಆಗಲಿದ್ದು, ಅದಾದ ಬಳಿಕ ರಿಲೀಸ್ ಡೇಟ್ ಸಹ ಅನೌನ್ಸ್ ಮಾಡಿಕೊಳ್ಳಲು ‘ಪೊಗರು’ ಟೀಮ್ ಪ್ಲಾ್ಯನ್ ಮಾಡಿದೆ. ಚಿತ್ರದಲ್ಲಿ ಧ್ರುವ ಸರ್ಜಾ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದು, ಆ ಪೈಕಿ ಟಪೋರಿ ಲುಕ್ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಈಗಾಗಲೇ ತೆರೆಬಿದ್ದಿದೆ. 18 ವರ್ಷದ ಯುವಕನಾಗಿಯೂ ಅವರನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆಯಾದರೂ, ಮುಂದಿನ ದಿನಗಳಲ್ಲಿ ಆ ಲುಕ್ ಬಹಿರಂಗವಾಗಲಿದೆ. ಮೊದಲ ಬಾರಿ ಧ್ರುವಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ್ದು, ನಂದಕಿಶೋರ್ ನಿರ್ದೇಶನ ಮಾಡಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ನಲ್ಲಿ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕರೊನಾದಿಂದಾಗಿ ರಿಲೀಸ್ ದಿನಾಂಕವನ್ನು ಚಿತ್ರತಂಡ ಮುಂದೂಡಿಕೊಂಡಿದೆ.
ಇತ್ತ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಾಯಕತ್ವದ ‘ರಾಬರ್ಟ್’ ಹಾಡಿನ ಮೂಲಕ ಸದ್ದು ಮಾಡಲು ‘ದೋಸ್ತ’ನ ಜತೆ ಆಗಮಿಸುತ್ತದೆ. ಇತ್ತೀಚೆಗಷ್ಟೇ ‘ಜೈ ಶ್ರೀರಾಮ್.’ ಹಾಡಿನ ಮೂಲಕ ಕ್ರೇಜ್ ಸೃಷ್ಟಿಸಿದ್ದ ‘ರಾಬರ್ಟ್’ ಸಿನಿಮಾ, ಮಾ. 21ಕ್ಕೆ ಚಿತ್ರದ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿಕೊಳ್ಳಲಿದೆ. ‘ದೋಸ್ತ ಕಣೋ’ ಎಂಬ ಹಾಡು ಇದಾಗಿರಲಿದ್ದು, ತರುಣ್ ಸುಧೀರ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಏಪ್ರಿಲ್ 9ಕ್ಕೆ ‘ರಾಬರ್ಟ್’ ಸಿನಿಮಾ ತೆರೆಕಾಣುವ ಸಾಧ್ಯತೆ ಇದ್ದು, ಉಮಾಪತಿ ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.