ಬೆಂಗಳೂರು: ‘ರಾಕಿಂಗ್ ಸ್ಟಾರ್’ ಯಶ್ ಅವರ ಹುಟ್ಟುಹಬ್ಬದ ನಿಮಿತ್ತ ಬಹುನಿರೀಕ್ಷಿತ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಟೀಸರ್ ಗುರುವಾರ (ಜನ.07) ರಾತ್ರಿ 9.29ಕ್ಕೆ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಆಗಿದೆ. ಹಾಗೆ ರಿಲೀಸ್ ಆದ ಟೀಸರ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರ ಈಗಾಗಲೇ ಹಲವು ದಾಖಲೆಗಳನ್ನು ಮುರಿದಿದೆ. ಇನ್ನೂ ಕೆಲವು ದಾಖಲೆಗಳನ್ನು ಪುಡಿ ಮಾಡಲು ಹತ್ತಿರದಲ್ಲಿದೆ. 24 ಗಂಟೆಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಟ್ರೇಲರ್ಗಳ ಪೈಕಿ ಅಕ್ಷಯ್ ಕುಮಾರ್ ಅಭಿನಯದ ‘ಸೂರ್ಯವಂಶಿ’ (42.9 ಮಿಲಿಯನ್) ಇತ್ತು. ಇದೀಗ 78 ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ ಆ ದಾಖಲೆಯನ್ನು ‘ಕೆಜಿಎಫ್ 2’ ಮುರಿದಿದೆ.
ಅದೇ ರೀತಿ 24 ಗಂಟೆಯಲ್ಲಿ ಅತೀ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡ (6 ಮಿಲಿಯನ್) ಸಿನಿಮಾ ಸಾಲಿನಲ್ಲಿ ಸುಶಾಂತ್ ಸಿಂಗ್ ಅವರ ‘ದಿಲ್ ಬೇಚಾರ’ ಚಿತ್ರ ಮೊದಲ ಸ್ಥಾನದಲ್ಲಿದೆ. ಇದೀಗ ಯಶ್ ‘ಕೆಜಿಎಫ್ 2’ ನಾಲ್ಕು ಮಿಲಿಯನ್ ಲೈಕ್ಸ್ ಗಿಟ್ಟಿಸಿಕೊಂಡು ಮುನ್ನುಗ್ಗುತ್ತಿದೆ. ಅತಿ ಬೇಗ ಒಂದು ಮಿಲಿಯನ್ ಲೈಕ್ಸ್ ಪಡೆದ ಸಿನಿಮಾ ಇಲ್ಲಿಯವರೆಗೂ ವಿಜಯ್ ನಟನೆಯ ‘ಬಿಗಿಲ್’ ಆಗಿತ್ತು. ಇದೀಗ ಆ ಸ್ಥಾನವನ್ನು ‘ಕೆಜಿಎಫ್ 2’ ವಶಪಡಿಸಿಕೊಂಡಿದೆ.
ಇನ್ನು, ಭಾರತೀಯ ಚಿತ್ರರಂಗದಲ್ಲೇ ಅತೀ ಹೆಚ್ಚು ವೀಕ್ಷಣೆಗೆ ಒಳಗಾದ ಟ್ರೇಲರ್ ಎಂಬ ಹೆಗ್ಗಳಿಕೆ ‘ದಿಲ್ ಬೇಚಾರ’ ಚಿತ್ರಕ್ಕಿದೆ. ಜುಲೈ ಆರರಂದು ಬಿಡುಗಡೆಯಾದ ಈ ಟ್ರೇಲರ್ ಇದುವರೆಗೂ ಒಂಬತ್ತು ಕೋಟಿ ವೀಕ್ಷಣೆ ಪಡೆದಿದೆ. ‘ಕೆಜಿಎಫ್ 2’ ಚಿತ್ರದ ಟೀಸರ್ ಒಂದೇ ದಿನದಲ್ಲಿ ಆರು ಕೋಟಿ ವ್ಯೂಸ್ ಪಡೆದು, ಒಂದು ದಿನದಲ್ಲಿ ಅತೀ ಹೆಚ್ಚು ವ್ಯೂಸ್ ಪಡೆದ ಮೊದಲ ಟೀಸರ್ ಆಗಿದೆ. ಅಷ್ಟೇ ಅಲ್ಲ, ಕೆಲವೇ ದಿನಗಳಲ್ಲಿ ‘ದಿಲ್ ಬೇಚಾರ’ ಚಿತ್ರದ ದಾಖಲೆಯನ್ನು ಮುರಿಯಲಿದೆ ಎನ್ನುವುದು ವಿಶೇಷ.
ಅದ್ದೂರಿ ಜನ್ಮ ದಿನಾಚರಣೆ ಯನ್ನು ಬದಿಗಿಟ್ಟು ಸರಳ ಆಚರಣೆಗೆ ಮೊರ ಹೋದ ಯಶ್, ಮಹಾಲಕ್ಷ್ಮೀ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. ಆದಕ್ಕೂ ಮುನ್ನ ರಾತ್ರಿ ‘ಕೆಜಿಎಫ್’ ತಂಡದವರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಮಡದಿ ರಾಧಿಕಾ ಪಂಡಿತ್ ಸಹ ಪತಿಯ ಬರ್ತ್ಡೇ ಮಾಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಅಭಿಮಾನಿ ವಲಯದಲ್ಲಿ ದೊಡ್ಡ ಮಟ್ಟದ ಸಂಭ್ರಮ ಕಾಣದಿದ್ದರೂ, ಒಂದಷ್ಟು ಚಿತ್ರಮಂದಿರಗಳಲ್ಲಿ ಟೀಸರ್ ಸಲುವಾಗಿಯೇ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು.