ಸಿನಿವಾಣಿ

'ಕೆಜಿಎಫ್​ 2' ಚಿತ್ರದ ಸ್ಯಾಟಿಲೈಟ್​​ ಹಕ್ಕುಗಳು ಜೀ ತೆಕ್ಕೆಗೆ ...

ಬೆಂಗಳೂರು: ಯಶ್ ಅಭಿನಯದ ‘ಕೆಜಿಎಫ್​ 2’ ಚಿತ್ರತಂಡದಿಂದ ಅಪ್‌ಡೇಟ್ ಬರದೆ ಬಹಳ ಕಾಲವೇ ಆಗಿದೆ. ಜುಲೈ 16ಕ್ಕೆ ಬಿಡುಗಡೆಯಾಗಬೇಕಿದ್ದ ಚಿತ್ರವು, ಇದೀಗ ಮುಂದಕ್ಕೆ ಹೋಗಿದೆ. ಸೆಪ್ಟೆಂಬರ್ 09ಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿತ್ತಾದರೂ, ಚಿತ್ರತಂಡ ಈ ಕುರಿತು ಯಾವುದೇ ಸ್ಪಷ್ಟನೆ ನೀಡಲಿಲ್ಲ. ಬರೀ ಬಿಡುಗಡೆ ದಿನಾಂಕವಷ್ಟೇ ಅಲ್ಲ, ಚಿತ್ರ ಯಾವ ಹಂತದಲ್ಲಿದೆ, ಏನಾಗುತ್ತಿದೆ ಎಂಬ ಮಾಹಿತಿಯನ್ನೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಹೀಗಿರುವಾಗಲೇ, ಸದ್ಯದಲ್ಲೇ ಒಂದು ಅಪ್‌ಡೇಟ್ ಸಿಕ್ಕಿದೆ. ಅದೇನೆಂದರೆ, ಚಿತ್ರದ ಸ್ಯಾಟಿಲೈಟ್​ ಹಕ್ಕುಗಳು ಜೀ ಟಿವಿಗೆ ಮಾರಾಟವಾಗಿವೆ. ಈ ಹಕ್ಕುಗಳು ಬರೀ ನಾಲ್ಕು ಭಾಷೆಗಳದ್ದು ಮಾತ್ರ. ಅಂದರೆ ದಕ್ಷಿಣದ ನಾಲ್ಕು ಭಾಷೆಗಳಾದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಅವತರಣಿಕೆಗಳ ಹಕ್ಕುಗಳನ್ನು ಜೀ ಟಿವಿಗೆ ಮಾರಾಟ ಮಾಡಲಾಗಿದೆ. ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಎಂಬ ವಿಷಯವನ್ನು ಚಿತ್ರತಂಡದವರು ಬಹಿರಂಗಗೊಳಿಸಿಲ್ಲ. ಆದರೆ, ನಾಲ್ಕೂ ಭಾಷೆಗಳಾದ್ದರಿಂದ ದೊಡ್ಡ ಮೊತ್ತಕ್ಕೆ ಹೋಗಿದೆ ಎಂದು ಹೇಳಲಾಗುತ್ತಿದೆ.

ಇನ್ನು, ಹಿಂದಿ ಚಿತ್ರದ ಅವತರಣಿಕೆಯು ಮಾರಾಟವಾಗಬೇಕಿದ್ದು, ಯಾವ ಚಾನಲ್​ಗೆ ಹೋಗಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. ಇದಲ್ಲದೆ, ಐದು ಭಾಷೆಗಳ ಡಿಜಿಟಲ್​ ಹಕ್ಕುಗಳನ್ನು ಯಾರು ಕೊಳ್ಳುತ್ತಾರೆ ಎಂಬ ಚರ್ಚೆ ನಡೆಯುತ್ತಿದ್ದು, ಸದ್ಯದಲ್ಲೇ ಡಿಜಿಟಲ್​ ಪಾರ್ಟ್ನರ್​ ಬಗ್ಗೆಯೂ ಚಿತ್ರತಂಡ ಘೋಷಿಸಯವ ಸಾಧ್ಯತೆ ಇದೆ.

'ಕೆಜಿಎಫ್​ 2' ಚಿತ್ರವು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಯಶ್​, ಶ್ರೀನಿಧಿ ಶೆಟ್ಟಿ, ಸಂಜಯ್​ ದತ್​, ರವೀನಾ ಟಂಡನ್​ ಮುಂತಾದವರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್​ ಬ್ಯಾನರ್​ನಡಿ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸುತ್ತಿರುವ ಈ ಚಿತ್ರವನ್ನು ಪ್ರಶಾಂತ್​ ನೀಲ್​ ನಿರ್ದೇಶಿಸಿದ್ದಾರೆ.