ಸಿನಿವಾಣಿ

‘ಕೆಜಿಎಫ್​ 2’ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿ

manjunathktgns

ಬೆಂಗಳೂರು: ಎಲ್ಲ ಅಂದುಕೊಂಡಂತೆ ಆಗಿದ್ದರೆ, ಅ. 24ರಂದು ಕೆಜಿಎಫ್​ ಚಾಪ್ಟರ್ 2 ಸಿನಿಮಾ ಗ್ರ್ಯಾಂಡ್​ ರಿಲೀಸ್​ ಆಗಬೇಕಿತ್ತು. ಆದರೆ, ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್​ ಒತ್ತಟಿಗಿರಲಿ, ಶೂಟಿಂಗ್​ ಮಾಡಿಕೊಳ್ಳುವುದಕ್ಕೇ ಸಮಯ ಕೂಡಿ ಬಂದಿರಲಿಲ್ಲ. ಇದೀಗ ಈ ನಡುವೆ ಹೊಸ ಬಿಡುಗಡೆ ದಿನಾಂಕವೊಂದು ಸದ್ದು ಮಾಡುತ್ತಿದೆ.

ಹೌದು, ಈಗಾಗಲೇ ಚಿತ್ರೀಕರಣ ಆರಂಭಿಸಿರುವ ಕೆಜಿಎಫ್​ ತಂಡ, ಸದ್ಯ ಉಡುಪಿಯ ಮಲ್ಪೆ ಬೀಚ್​ನಲ್ಲಿ ಬೀಡು ಬಿಟ್ಟಿದೆ. ಶ್ರೀನಿಧಿ ಶೆಟ್ಟಿ ಜತೆಗಿನ ಒಂದಷ್ಟು ದೃಶ್ಯಗಳನ್ನು ತಂಡ ಚಿತ್ರಿಸಿಕೊಂಡಿದೆ. ಇನ್ನೇನು ಶೀಘ್ರದಲ್ಲಿ ಮುಂಬೈನತ್ತಲೂ ಪ್ರಯಾಣ ಬೆಳೆಸಲಿದೆ.

ಹೀಗಿರುವಾಗಲೇ 2021ರ ಜನವರಿ 14ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೆಜಿಎಫ್ ಚಿತ್ರ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿರುವುದರಿಂದ, ಪೋಸ್ಟ್ ಪ್ರೊಡಕ್ಷನ್​ ಕೆಲಸಗಳೂ ಸಹ ಶೂಟಿಂಗ್​ ಜತೆಯಲ್ಲಿಯೇ ಸಾಗಿದೆ.

ಈ ನಡುವೆ ಕ್ಯಾನ್ಸರ್​ ನಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ನಟ ಸಂಜಯ್​ ದತ್​, ನವೆಂಬರ್​ ತಿಂಗಳಲ್ಲಿ ಕೆಜಿಎಫ್​ ಸೆಟ್​ ಸೇರಿಕೊಂಡು, ಅವರ ಭಾಗದ ಚಿತ್ರೀಕರಣ ಮುಗಿಸಲಿದ್ದಾರೆ. ಒಟ್ಟಿನಲ್ಲಿ ನವೆಂಬರ್ ಅಂತ್ಯದೊಳಗೆ ಎಲ್ಲ ಚಿತ್ರೀಕರಣ ಮುಗಿಸಿಕೊಂಡು, ಜನವರಿಗೆ ಕೆಜಿಎಫ್​ ಸಿನಿಮಾ ಅಬ್ಬರಿಸಲಿದೆ.

ಪ್ರಶಾಂತ್ ನೀಲ್​ ನಿರ್ದೇಶನದ ಕೆಜಿಎಫ್​ ಚಿತ್ರವನ್ನು ಹೊಂಬಾಳೆ ಫಿಲಂಸ್​ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.