ಬೆಂಗಳೂರು: ‘ಕೆಜಿಎಫ್ - ಚಾಪ್ಟರ್ 2’ ಚಿತ್ರದಲ್ಲಿ ಪ್ರಕಾಶ್ ರೈ ನಟಿಸುತ್ತಿರುವ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಅದಕ್ಕೆ ಪ್ರತಿಯಾಗಿ ಅವರು ಚಿತ್ರದಲ್ಲಿ ನಟಿಸಿದರೆ ನೋಡುವುದಿಲ್ಲ ಎಂಬ ಅಭಿಯಾನವೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
‘ಕೆಜಿಎಫ್ 2’ ಚಿತ್ರದ ಚಿತ್ರೀಕರಣ ಬುಧವಾರದಿಂದ ಕಂಠೀರವ ಸ್ಟುಡಿಯೋದಲ್ಲಿ ಪ್ರಾರಂಭವಾಗಿದ್ದು, ಪ್ರಕಾಶ್ ರೈ ಅವರ ಎಂಟ್ರಿಯಾಗಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ, ಅನಂತ್ ನಾಗ್ ಅವರು ಚಿತ್ರದಲ್ಲಿ ನಟಿಸುತ್ತಿಲ್ಲ ಎಂಬ ಸುದ್ದಿ ಬಂದಿತ್ತು. ಈಗ ಪ್ರಕಾಶ್ ರೈ ಅವರ ಪಾತ್ರವು, ಅನಂತ್ ನಾಗ್ ಅವರ ಪಾತ್ರವನ್ನು ಸಾಕಷ್ಟು ಹೋಲುವುದರಿಂದ, ಅನಂತ್ ಅವರ ಬದಲಿಗೆ ರೈ ಬಂದಿದ್ದಾರೆ ಎಂಬ ಅನುಮಾನ ಪ್ರೇಕ್ಷಕರಲ್ಲಿ ಮನೆಮಾಡಿದೆ. ಅನಂತ್ ಅವರ ಪಾತ್ರಕ್ಕೂ, ರೈ ಅವರ ಪಾತ್ರಕ್ಕೂ ಸಂಬಂಧವಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದ್ದರೂ, ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ.
ಪ್ರಮುಖವಾಗಿ, ಅನಂತ್ ನಾಗ್ ಅವರಂತಹ ಪ್ರತಿಭಾವಂತ ಕಲಾವಿದರನ್ನು ಬದಲಿಗೆ ಇನ್ನೊಬ್ಬರು ಬಂದಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಆ ಪಾತ್ರವನ್ನು ರೈ ಅವರು ಮಾಡುತ್ತಿರುವ ಬಗ್ಗೆ ಹಲವರು ಆಕ್ಷೇಪ ಎತ್ತುತ್ತಿದ್ದಾರೆ. ಅದಕ್ಕೆ ಕಾರಣ, ಪ್ರಕಾಶ್ ರೈ ಅವರ ರಾಜಕೀಯ ನಿಲುವು ಮತ್ತು ಧೋರಣೆಗಳು.
ಪ್ರಕಾಶ್ ರೈ ಅವರು ತಮ್ಮ ರಾಜಕೀಯ ನಿಲುವು ಮತ್ತು ಧೋರಣೆಗಳಿಂದಾಗಿ ಸಾಕಷ್ಟು ವಿವಾದ ಮತ್ತು ವಿರೋಧ ಕಟ್ಟಿಕೊಂಡಿರುವುದು ಗೊತ್ತೇ ಇದೆ. ಅಂತಹವರು ಚಿತ್ರದಲ್ಲಿ ನಟಿಸಿದರೆ ನೋಡುವುದಿಲ್ಲ ಎಂದು ಸಾಕಷ್ಟು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಬುಧವಾರವಷ್ಟೇ ಪ್ರಕಾಶ್ ರೈ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿ ನಿರ್ದೇಶಕ ಪ್ರಶಾಂತ್ ನೀಲ್ ಒಂದು ಟ್ವೀಟ್ ಮಾಡಿದ್ದರು. ಇದಕ್ಕೆ ನೂರಾರು ಜನ ಪ್ರತಿಕ್ರಿಯಿಸಿದ್ದು, ರೈ ನಟಿಸಿದರೆ ಚಿತ್ರ ನೋಡುವುದಿಲ್ಲ ಎಂದು ಹಲವರು ಹೇಳಿಕೊಂಡಿದ್ದಾರೆ. ಬರೀ ಕರ್ನಾಟಕವಷ್ಟೇ ಅಲ್ಲ, ಬೇರೆ ರಾಜ್ಯಗಳ ಮತ್ತು ಭಾಷೆಗಳ ‘ಕೆಜಿಎಫ್’ ಅಭಿಮಾನಿಗಳು ಸಹ ಚಿತ್ರ ನೋಡುವುದಿಲ್ಲ ಎಂದು ಧ್ವನಿಗೂಡಿಸಿದ್ದಾರೆ.
ರಾಜಕೀಯ ನಿಲುವು ಬೇರೆ, ನಟನೆ ಬೇರೆ. ಎರಡನ್ನೂ ಒಟ್ಟಿಗೆ ಸೇರಿಸುವುದು ಸಮಂಜಸವಲ್ಲ ಮತ್ತು ಒಬ್ಬರ ನಿಲುವಿನಿಂದಾಗಿ ಅವರ ಚಿತ್ರ ನೋಡುವುದಿಲ್ಲ ಎಂಬ ಧೋರಣೆ ಸರಿ ಅಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಈ ಪ್ರಕರಣ ಯಾವ ರೂಪ ಪಡೆಯುತ್ತದೋ ಗೊತ್ತಿಲ್ಲ.