ಸಿನಿವಾಣಿ

ಮಮ್ಮೂಟ್ಟಿ ಜತೆಗಿರುವ ಈ ಪುಟ್ಟ ಹುಡುಗಿ ಯಾರು ಹೇಳಿ ನೋಡೋಣ?

ಮಲಯಾಳಂನ ಖ್ಯಾತ ನಟ ಮಮ್ಮೂಟ್ಟಿ ಸೋಮವಾರವಷ್ಟೇ (ಸೆಪ್ಟೆಂಬರ್​ 7) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮಮ್ಮೂಟ್ಟಿ ಅವರಿಗೆ ಜಗತ್ತಿನಾದ್ಯಂತ ಹಲವು ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸೋಷಿಯಲ್​ ಮೀಡಿಯಾ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.

ಈ ಎಲ್ಲಾ ಶುಭಾಶಯಗಳ ಮಧ್ಯೆಯೇ, ಒಂದು ಪೋಸ್ಟ್​ ಬಹಳ ವೈರಲ್​ ಆಗಿದೆ. ಸ್ಟಾರ್​ ನಟಿಯೊಬ್ಬರು, ಹಲವು ವರ್ಷಗಳ ಹಿಂದೆ ಮಮ್ಮೂಟ್ಟಿ ಅವರ ಜತೆಗೆ ತೆಗಿಸಿಕೊಂಡಿರುವ ಫೋಟೋವೊಂದನ್ನು ಶೇರ್ ಮಾಡಿಕೊಳ್ಳುವುದರ ಜತೆಗೆ, ಮಮ್ಮೂಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಅಂದಹಾಗೆ, ಆ ನಟಿ ಯಾರು ಗೊತ್ತಾ? ದಕ್ಷಿಣ ಭಾರತದ ಜನಪ್ರಿಯ ನಟಿ ಮತ್ತು 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್​. ಕೀರ್ತಿ ಅವರು ಹಲವು ವರ್ಷಗಳ ಹಿಂದೆ ಮಮ್ಮೂಟ್ಟಿ ಅವರ ಜತೆಗಿರುವ ಒಂದು ಫೋಟೋ ಹಂಚಿಕೊಳ್ಳುವುದರ ಜತೆಗೆ, ಅವರನ್ನು ಅಂಕಲ್​ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ, 'ನೀವು ನಮಗೆ ನಿರಂತರ ಸ್ಫೂರ್ತಿ' ಎಂದು ಹೇಳಿದ್ದಾರೆ.

ಈ ಫೋಟೋಗಳ ಜತೆಗೆ, ತಾವು ದೊಡ್ಡವರಾದ ಮೇಲೆ ಮಮ್ಮೂಟ್ಟಿ ಜತೆಗಿರುವ ಒಂದು ಫೋಟೋವನ್ನೂ ಅವರು ಶೇರ್​ ಮಾಡಿಕೊಂಡಿದ್ದಾರೆ. ಮದುವೆಯೊಂದರಲ್ಲಿ ಈ ಫೋಟೋ ತೆಗೆಯಲಾಗಿದ್ದು, ಎರಡೂ ಕಾಲಘಟ್ಟಗಳ ಫೋಟೋ ಹಂಚಿಕೊಂಡಿರುವುದು ವಿಶೇಷ.