ಸಿನಿವಾಣಿ

ನಟಿ ಕೀರ್ತಿ ಸುರೇಶ್ ಮದುವೆ ಫಿಕ್ಸ್​! ಸೌತ್​ ಸುಂದರಿ ಕೈಹಿಡಿಯುವ ವರನ್ಯಾರು ಗೊತ್ತೇ? Keerthy Suresh ​

ಚೆನ್ನೈ: ನಟಿ ಕೀರ್ತಿ ಸುರೇಶ್ ( Keerthy Suresh ) ತಮಿಳು ಚಿತ್ರರಂಗದ ಸ್ಟಾರ್​ ನಟಿಯರಲ್ಲಿ ಒಬ್ಬರು. ತೆಲುಗಿನಲ್ಲೂ ನಟಿಸಿದ್ದಾರೆ. ನಟ ವಿಜಯ್​, ಸೂರ್ಯ, ವಿಕ್ರಮ್​, ಶಿವಕಾರ್ತಿಕೇಯನ್​,​ ನಾನಿ, ಮಹೇಶ್​ ಬಾಬು ಸೇರಿದಂತೆ ಸ್ಟಾರ್​ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್​ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್​ ನಟನೆಯ ಡಬ್ಬಿಂಗ್​ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.

ಸದ್ಯ ಬಾಲಿವುಡ್​ಗೂ ಕೀರ್ತಿ ಸುರೇಶ್​ ಕಾಲಿಟ್ಟಿದ್ದಾರೆ. ನಟ ವರುಣ್ ಧವನ್​ ನಟನೆಯ ಬಾಬಿ ಜಾನ್​ ಸಿನಿಮಾಗೆ ಕೀರ್ತಿ ನಾಯಕಿಯಾಗಿದ್ದಾರೆ. ಈ ಸಿನಿಮಾವನ್ನು ಖ್ಯಾತ ತಮಿಳು ನಿರ್ದೇಶಕ ಆಟ್ಲೀ ನಿರ್ದೇಶನ ಮಾಡುತ್ತಿದ್ದಾರೆ. ಇದು ಇಳಯದಳಪತಿ ವಿಜಯ್​ ನಟನೆಯ ಸೂಪರ್​ ಹಿಟ್​ ತಮಿಳು ಸಿನಿಮಾ ಥೇರಿ ರಿಮೇಕ್​.​

ತಾಜಾ ಸಂಗತಿ ಏನೆಂದರೆ, ಕೀರ್ತಿ ಸುರೇಶ್​ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ. ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದು, ಗೋವಾದಲ್ಲಿ ವಿವಾಹ ಸಮಾರಂಭ ನಡೆಯಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ.

ನಟಿ ಕೀರ್ತಿ ಸುರೇಶ್ ಅವರು​ ಖ್ಯಾತ ಸಂಗೀತಗಾರ ಅನಿರುದ್ಧ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಕಳೆದ ವರ್ಷ ಹಬ್ಬಿತ್ತು. ಸದ್ಯದಲ್ಲೇ ಇವರಿಬ್ಬರ ಮದುವೆ ನಡೆಯಲಿದೆ ಎಂದೂ ಹೇಳಲಾಗಿತ್ತು. ಆದರೆ, ಇದೆಲ್ಲ ಕೇವಲ ವದಂತಿಯಷ್ಟೇ ಎಂದು ಕೀರ್ತಿ ಸುರೇಶ್​ ಅವರ ತಂದೆ ಅಂತ್ಯ ಹಾಡಿದ್ದರು. ಇದೇ ಸಮಯದಲ್ಲಿ ಕೀರ್ತಿ ಸುರೇಶ್ ಮದುವೆ ಬಗ್ಗೆ ಹೊಸ ಮಾಹಿತಿಯೊಂದು ಹರಿದಾಡುತ್ತಿದೆ.

ಮುಂಬರುವ ಡಿಸೆಂಬರ್‌ನಲ್ಲಿ ಕೀರ್ತಿ ಸುರೇಶ್ ಅವರು ವಿವಾಹವಾಗಲಿದ್ದಾರಂತೆ. ಅವರ ಭಾವಿ ಪತಿ ಸಂಬಂಧಿಯಾಗಿದ್ದು, ಪಾಲಕರಿಂದ ಸಂಪೂರ್ಣವಾಗಿ ನಿಶ್ಚಯಿಸಿದ ಮದುವೆಯಾಗಿದೆ ಎಂದು ವರದಿಯಾಗಿದೆ. ಈ ಮದುವೆಗೆ ಕೀರ್ತಿ ಸುರೇಶ್ ಕೂಡ ಒಪ್ಪಿಗೆ ಸೂಚಿಸಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ.

ಇನ್ನು ಮದುವೆ ವಿಚಾರದ ಬಗ್ಗೆ ಕೀರ್ತಿ ಸುರೇಶ್ ಕಡೆಯಿಂದ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದೂ ಗಮನಾರ್ಹ. ಕೀರ್ತಿ ಸುರೇಶ್ ಅವರ ಈ ನಿರ್ಧಾರವನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ಮದುವೆ ಸುದ್ದಿ ಎಷ್ಟು ನಿಜ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. (ಏಜೆನ್ಸೀಸ್​)