Keerthy Suresh : ಕಳೆದ ಕೆಲವು ದಿನಗಳಿಂದ ಸೌತ್ ಇಂಡಿಯನ್ ಸ್ಟಾರ್ ಹೀರೋಯಿನ್ ಕೀರ್ತಿ ಸುರೇಶ್ ಅವರ ಮದುವೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗೊತ್ತೇ ಇದೆ. ಕೀರ್ತಿ ಅವರ ಭಾವಿ ಪತಿ ಇವರೇ ಎಂದು ಹೇಳುವ ಕೆಲವು ಫೋಟೋಗಳು ಕೂಡ ವೈರಲ್ ಆಗುತ್ತಿವೆ. ಆದರೀಗ ವದಂತಿಗಳು ನಿಜವಾಗಿವೆ. ಸ್ವತಃ ಕೀರ್ತಿ ಅವರೇ ತಮ್ಮ ಭಾವಿ ಪತಿಯನ್ನು ಪರಿಚಯಿಸಿ, ವದಂತಿಗಳಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಭಾವಿ ಪತಿಯೊಂದಿಗೆ ಇರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ದೀಪಾವಳಿ ಆಚರಣೆ ಸಂದರ್ಭದಲ್ಲಿ ಸೆರೆಹಿಡಿದಂತಹ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಕೀರ್ತಿ ಹಂಚಿಕೊಂಡಿದ್ದಾರೆ. ಆದರೆ, ಭಾವಿ ಪತಿಯ ಮುಖವನ್ನು ಬಹಿರಂಗಪಡಿಸಿಲ್ಲ. ಇಬ್ಬರು ಕ್ಯಾಮೆರಾಗೆ ಬೆನ್ನು ಮಾಡಿ ಆಗಸದಲ್ಲಿ ಬೆಳಕು ನೋಡುತ್ತಿರುವ ದೃಶ್ಯ ಫೋಟೋದಲ್ಲಿದೆ. ಆದರೆ, ಭಾವಿ ಪತಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. ಆಂಟೋನಿ ಜತೆಗಿನ ಕಳೆದ 15 ವರ್ಷಗಳ ಸ್ನೇಹ ಜೀವನಪೂರ್ತಿ ಇರುತ್ತದೆ. ಎಂದೆಂದಿಗೂ ಆಂಟೋನಿ-ಕೀರ್ತಿ ಒಂದೇ ಎಂದು ಕೀರ್ತಿ ಬರೆದುಕೊಂಡಿದ್ದಾರೆ.
ಸದ್ಯ ಕೀರ್ತಿ ಅವರ ಈ ಪೋಸ್ಟ್ ವೈರಲ್ ಆಗಿದೆ. ಅಭಿಮಾನಿಗಳು ಮತ್ತು ಅನೇಕ ಸೆಲೆಬ್ರಿಟಿಗಳು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಅಂದಹಾಗೆ ಕೀರ್ತಿ ಸುರೇಶ್ ಮಲಯಾಳಂ ನಿರ್ಮಾಪಕ ಸುರೇಶ್ ಮತ್ತು ನಟಿ ಮೇನಕಾ ಅವರ ಪುತ್ರಿ. ಬಾಲನಟಿಯಾಗಿ ಚಿತ್ರರಂಗ ಪ್ರವೇಶ ಮಾಡಿದ ಕೀರ್ತಿ ಮಲಯಾಳಂ ಚಿತ್ರ ಗೀತಾಂಜಲಿ ಮೂಲಕ ನಟಿಯಾಗಿ ಬಡ್ತಿ ಪಡೆದರು. ಸದ್ಯ ತಮಿಳು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ತೆಲುಗಿನಲ್ಲೂ ನಟಿಸಿದ್ದಾರೆ. ನಟ ವಿಜಯ್, ಸೂರ್ಯ, ವಿಕ್ರಮ್, ಶಿವಕಾರ್ತಿಕೇಯನ್, ನಾನಿ, ಮಹೇಶ್ ಬಾಬು ಸೇರಿದಂತೆ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್ ನಟನೆಯ ಡಬ್ಬಿಂಗ್ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.
ಪ್ರಸ್ತುತ ರಿವಾಲ್ವರ್ ರೀಟಾ ಮತ್ತು ಬೇಬಿ ಜಾನ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕೀರ್ತಿ ಸುರೇಶ್ ಭಾವಿ ಪತಿ ಆಂಟೋನಿ ಇಂಜಿನಿಯರಿಂಗ್ ಓದಿದ್ದು, ಕೆಲಕಾಲ ವಿದೇಶದಲ್ಲಿ ಕೆಲಸ ಮಾಡಿದ್ದರು. ಸದ್ಯ ಕೇರಳದಲ್ಲಿ ಹಲವು ವ್ಯವಹಾರಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ಡಿಸೆಂಬರ್ನಲ್ಲಿ ಇಬ್ಬರು ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಇದೆ. (ಏಜೆನ್ಸೀಸ್)