ಬೆಂಗಳೂರು: 'ಕೌಟಿಲ್ಯ' ಎಂಬ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ 'ಶನಿ', 'ಮಹಾಕಾಳಿ' ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅರ್ಜುನ್ ಮಹೇಶ್. ಈಗ ಆ ಚಿತ್ರವು ಆ. 26ಕ್ಕೆ ರಾಜ್ಯದ್ಯಂತ ಬಿಡುಗಡೆಯಾಗುತ್ತಿದೆ. ಆದರೆ, ಬಿಡುಗಡೆ ಸಂದರ್ಭದಲ್ಲಿ ಅವರೇ ಮಿಸ್ ಆಗುತ್ತಿದ್ದಾರೆ. ಅದಕ್ಕೆ ಕಾರಣ, 'ಬಿಗ್ ಬಾಸ್ ಓಟಿಟಿ ಕನ್ನಡ'ದಲ್ಲಿ ಅರ್ಜುನ್ ಮಹೇಶ್ ಭಾಗವಹಿಸುತ್ತಿದ್ದು, ಬಿಡುಗಡೆಯ ಸಂದರ್ಭದಲ್ಲಿ ಹೊರಬರುವುದು ಸಂಶಯವಾಗಿದೆ. ಅವರ ಅನುಪಸ್ಥಿತಿಯಲ್ಲೇ ಅವರು ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.
ಇತ್ತೀಚೆಗೆ 'ಕೌಟಿಲ್ಯ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ವೀಕ್ಷೆಣೆಯಾಗುತ್ತಿದೆ. 'ಜೋಗಿ' ಪ್ರೇಮ್, ರಕ್ಷಿತ್ ಶೆಟ್ಟಿ ಮುಂತಾದ ಸ್ಯಾಂಡlffವುಡ್ ಗಣ್ಯರು ಟ್ರೇಲರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಶ್ರೀ ಕಲ್ಲೂರು ಆಂಜನೇಯ ಮೂವೀಸ್ ಲಾಂಛನದಲ್ಲಿ ವಿಜೇಂದ್ರ ಬಿ.ಎ ಈ ಚಿತ್ರವನ್ನು ನಿರ್ಮಿಸಿದ್ದು, ಪ್ರಭಾಕರ್ ಶೇರಖಾನೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. 'ಕೌಟಿಲ್ಯ' ಅಂದರೆ ಅರ್ಥಶಾಸ್ತ್ರದ ಪಿತಾಮಹ ಚಾಣಕ್ಯ. ಅರ್ಥಶಾಸ್ತ್ರದ ಒಂದು ಎಳೆಯನ್ನಿಟ್ಟುಕೊಂಡು ಈ ಚಿತ್ರದ ಕಥೆ ಹೆಣೆಯಲಾಗಿದೆ.
ಈ ಚಿತ್ರದ ಕುರಿತು ಮಾತನಾಡುವ ಪ್ರಭಾಕರ್, 'ಪ್ರಸ್ತುತ ಜನರು ಚಿತ್ರ ನೋಡುವ ರೀತಿ ಸಂಪೂರ್ಣ ಬದಲಾಗಿದೆ. ಜನ ಒಳ್ಳೆಯ ಕಥಾವಸ್ತುವುಳ್ಳ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ. ಖಂಡಿತವಾಗಿಯೂ ಜನರ ಮನಸ್ಸಿಗೆ ಹತ್ತಿರವಾಗುವ ಉತ್ತಮ ಕಂಟೆಂಟ್ 'ಕೌಟಿಲ್ಯ' ಚಿತ್ರದಲ್ಲಿದೆ ಎಂಬ ಭರವಸೆ ಇದೆ' ಎನ್ನುತ್ತಾರೆ.
'ಮಹಾಕಾಳಿ' ಧಾರಾವಾಹಿಯಲ್ಲಿ ದೇವಿ ಪಾತ್ರ ಮಾಡಿದ್ದ ಪ್ರಿಯಾಂಕ ಚಿಂಚೋಳಿ ಈ ಚಿತ್ರದ ನಾಯಕಿ. ಅರ್ಜುನ್ ಮತ್ತು ಪ್ರಿಯಾಂಕಾ ಜತೆಗೆ ನೀನಾಸಂ ಅಶ್ವತ್ಥ್, ಹರಣಿ, ರಘು ಪಾಂಡೇಶ್ವರ್, ಸೂರ್ಯ ಪ್ರವೀಣ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: VIDEO: ಛಾನ್ಸ್ ಕೊಡ್ತಿನಿ, ಒಂದು ಲಕ್ಷ ರೂ.ನೂ ಕೊಡ್ತಿನಿ…ಅವರ ಜತೆ ನೀವು… ಬಿಗ್ಬಾಸ್ ಸ್ಪರ್ಧಿ ಕಿರಣ್ ಬಿಚ್ಚಿಟ್ಟ ಕರಾಳ...
'ಕೌಟಿಲ್ಯ' ಚಿತ್ರಕ್ಕೆ ಗೌಸ್ ಪೀರ್ ಹಾಗೂ ಅರ್ಜುನ್ ರಮೇಶ್ ಹಾಡುಗಳನ್ನು ಬರೆದಿದ್ದು, ಕಿರಣ್ ಕೃಷ್ಣಮೂರ್ತಿ ಸಂಗೀತ ನೀಡಿದ್ದಾರೆ.