ಸಿನಿವಾಣಿ

ಕೊನೆಗೂ ಹೊರಬಿದ್ವು ಕತ್ರಿನಾ ಕೈಫ್​-ವಿಕಿ ಕೌಶಲ್ ಮದ್ವೆ ಫೋಟೋಗಳು; ಅವೆಲ್ಲ ನಕಲಿ, ಇಲ್ಲಿವೆ ಅಸಲಿ..

ನವದೆಹಲಿ: ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್​ ಹಾಗೂ ನಟ ವಿಕಿ ಕೌಶಲ್​ ಅವರು ಇಂದು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರ ಮದುವೆಯದ್ದು ಎನ್ನಲಾದ ಹಲವು ಫೋಟೋಗಳು ಹರಿದಾಡಲಾರಂಭಿಸಿದ್ದು, ಕೊನೆಗೂ ಅವು ನಕಲಿ ಎಂಬುದು ದೃಢಪಟ್ಟಿವೆ. ಮಾತ್ರವಲ್ಲ, ಇದೀಗ ಅಸಲಿ ಫೋಟೋಗಳು ಹೊರಹೊಮ್ಮಿವೆ.

ತಮ್ಮ ಮದುವೆಯ ಯಾವ ಫೋಟೋ-ವಿಡಿಯೋಗಳೂ ಹೊರಬೀಳದಂತೆ ಭಾರಿ ಎಚ್ಚರಿಕೆ ವಹಿಸಿ ರಾಜಸ್ಥಾನದ ಸವಾಯಿ ಮಾಧೋಪುರದ ಫೋರ್ಟ್​ ಬರ್ವಾರದಲ್ಲಿ ಅವರಿಬ್ಬರು ವಿವಾಹವಾಗಿದ್ದಾರೆ. ಅಲ್ಲದೆ ಇವರಿಬ್ಬರ ವಿವಾಹ ಸಮಾರಂಭದ ರಸಕ್ಷಣಗಳ ಪ್ರಸಾರ ಹಕ್ಕುಗಳನ್ನು ಒಟಿಟಿ ವೇದಿಕೆಗಳು ಖರೀದಿಸಿವೆ ಎಂಬ ಹಿನ್ನೆಲೆಯಲ್ಲಿ ಇಂಥದ್ದೊಂದು ಎಚ್ಚರಿಕೆ ವಹಿಸಲಾಗಿದೆ ಎನ್ನಲಾಗಿದೆ.

ಅದಾಗ್ಯೂ ಕೊನೆಗೂ ಇವರಿಬ್ಬರ ಮದುವೆಯ ಅಧಿಕೃತ ಫೋಟೋಗಳು ಬಹಿರಂಗಗೊಂಡಿದ್ದು, ಇದೀಗ ವೈರಲ್ ಆಗಲಾರಂಭಿಸಿವೆ. ಆ ಪೈಕಿ ನಾಲ್ಕು ಫೋಟೋಗಳು ಅಧಿಕೃತವಾಗಿ ಬಿಡುಗಡೆಗೊಂಡಿದ್ದು, ಎಲ್ಲೆಡೆ ಹರಿದಾಡಲಾರಂಭಿಸಿವೆ.