ಬೆಂಗಳೂರು: ಕಡಿಮೆ ದಿನಗಳಲ್ಲಿ ಕಡಿಮೆ ಬಜೆಟ್ ಚಿತ್ರಗಳನ್ನು ಮಾಡುವುದರಲ್ಲಿ ನಿರ್ದೇಶಕ ದಿನೇಶ್ ಬಾಬು ಅವರದ್ದು ಎತ್ತಿದ ಕೈ. ಕೇವಲ ಎರಡೇ ದಿನಗಳಲ್ಲಿ 'ಇದು ಸಾಧ್ಯ' ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ಕಡಿಮೆ ದಿನಗಳಲ್ಲಿ ಚಿತ್ರ ಮಾಡುವುದಕ್ಕೆ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ವಿಶ್ವನಾಥನ್ ಆನಂದ್ ಬಯೋಪಿಕ್ನಲ್ಲಿ ಧನುಷ್?
ಈಗ್ಯಾಕೆ ಅವರ ವಿಷಯ ಎಂದರೆ, ದಿನೇಶ್ ಬಾಬು ಅವರು 'ಕಸ್ತೂರಿ ಮಹಲ್' ಎಂಬ ಚಿತ್ರ ಶುರು ಮಾಡಿದ್ದು ಗೊತ್ತೇ ಇದೆ. ಅದವರ 50ನೇ ಚಿತ್ರವಾಗಿದ್ದು, ಕಳೆದ ತಿಂಗಳೇ ಆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ, ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಪ್ರಥಮ ಪ್ರತಿ ಸಿದ್ದವಾಗಲಿದೆ.
'ಕಸ್ತೂರಿ ಮಹಲ್' ಒಂದು ಸೂಪರ್ ನ್ಯಾಚುರಲ್ ಥ್ರಿಲ್ಲರ್ ಆಗಿದ್ದು, ಕಸ್ತೂರಿ ಮಹಲ್ ಎಂಬ ಮನೆಯಲ್ಲಿ ನಡೆಯುವ ಒಂದು ವಿಚಿತ್ರ ಘಟನೆಯೊಂದರ ಸುತ್ತ ಸುತ್ತುತ್ತದೆ. ಈ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸ್ಕಂದ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ನೀನಾಸಂ ಅಶ್ವಥ್ ಮುಂತಾದವರಿದ್ದಾರೆ.
ಕೊಟ್ಟಿಗೆಹಾರ, ಬಾಲೂರು ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿರುವ ಈ ಚಿತ್ರಕ್ಕೆ ದಿನೇಶ್ ಬಾಬು ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ರಚಿಸಿದ್ದಾರೆ. ರವೀಶ್ ನಿರ್ಮಿಸಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣವಿದೆ.