ಬೆಂಗಳೂರು: ಕಳೆದ ಕೆಲ ತಿಂಗಳಿಂದ ಪರಭಾಷೆಯ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದ ನಟಿ ಶಾನ್ವಿ ಶ್ರೀವಾತ್ಸವ್, ಇದೀಗ ಮತ್ತೆ ಸ್ಯಾಂಡಲ್ವುಡ್ ಕಡೆ ಗಮನಹರಿಸಿದ್ದಾರೆ. ಅದಕ್ಕೆ ಕಾರಣ; ‘ಕಸ್ತೂರಿ ಮಹಲ್’ ಸಿನಿಮಾ. ಹಿರಿಯ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ ಈ ಸಿನಿಮಾ ಇದೀಗ ಬಿಡುಗಡೆಯ ಸನಿಹದಲ್ಲಿದೆ. ಯಾವಾಗ ತೆರೆಗೆ ಬರಲಿದ್ದೇವೆ ಎಂಬುದನ್ನು ಹೇಳಿಕೊಳ್ಳುವುದಕ್ಕೇ ಇತ್ತೀಚೆಗೆ ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು. ಕಳೆದ ಎರಡೂವರೆ ವರ್ಷಗಳಿಂದ ಬೇರಾವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ಶಾನ್ವಿ, ‘ಕಸ್ತೂರಿ ಮಹಲ್’ ಮೂಲಕ ಆಗಮಿಸುತ್ತಿದ್ದಾರೆ. ಚಿತ್ರದ ಬಗ್ಗೆಯೂ ಅಷ್ಟೇ ನಿರೀಕ್ಷೆಯಲ್ಲಿದ್ದಾರೆ.
‘ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹಾರರ್ ಸಿನಿಮಾಗಳು ಬಂದಿವೆಯಾದರೂ, ಇದು ವಿಭಿನ್ನವಾಗಿರಲಿದೆ. ನನ್ನ ವೃತ್ತಿಜೀವನದಲ್ಲಿಯೂ ಹಿಂದೆಂದೂ ಕಾಣಿಸಿಕೊಳ್ಳದ ಹೊಸ ಅವತಾರದಲ್ಲಿ ನನ್ನನ್ನು ನೋಡಬಹುದು. ಇದೇ ಮೇ 13ಕ್ಕೆ ಚಿತ್ರಮಂದಿರಕ್ಕೆ ಬರುತ್ತಿದ್ದೇವೆ. ನೋಡಿ ಹರಸಿ’ ಎಂದರು. ಈ ಚಿತ್ರದಲ್ಲಿ ಸ್ಕಂದ ಅಶೋಕ್ ನಾಯಕನಾಗಿ ನಟಿಸಿದ್ದು, ಹಿರಿಯ ನಿರ್ದೇಶಕರ ಜತೆ ಕೆಲಸ ಮಾಡಿದ್ದು ತೃಪ್ತಿ ನೀಡಿದೆ ಎಂದರು. ‘ಈ ಸಿನಿಮಾದ ವಿಶೇಷತೆ ಏನೆಂದರೆ, ಕೊಟ್ಟಿಗೆಹಾರದ 200 ವರ್ಷ ಇತಿಹಾಸ ಇರುವ ನಮ್ಮ ಪೂರ್ವಜರ ಮನೆಯಲ್ಲಿ ಈ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಒಳ್ಳೆಯ ಪಾತ್ರದ ಜತೆಗೆ ಒಂದೊಳ್ಳೆ ಚಿತ್ರದಲ್ಲಿ ನಟಿಸಿದ ಖುಷಿ ಇದೆ’ ಎಂದರು.
ಅದೇ ರೀತಿ ಚಿತ್ರದ ಮತ್ತೋರ್ವ ನಟಿ ಶೃತಿ ಪ್ರಕಾಶ್ ಸಹ ಮಾತನಾಡಿದರು. ಹಿರಿಯ ನಟ ರಂಗಾಯಣ ರಘು, ವತ್ಸಲಾ ಮೋಹನ್, ಕಾಶಿಮಾ, ನೀನಾಸಂ ಅಶ್ವಥ್ ಪಾತ್ರದ ಬಗ್ಗೆ ಮಾತನಾಡಿದರು. ರವೀಶ್ ನಿರ್ವಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ರಮೇಶ್ ಕೃಷ್ಣ ಹಿನ್ನೆಲೆ ಸಂಗೀತ ನೀಡಿದ್ದಾರೆ. ಪಿಕೆಎಚ್ ದಾಸ್ ಛಾಯಾಗ್ರಹಣ ಮಾಡಿದ್ದಾರೆ.