ಸಿನಿವಾಣಿ

ಮತ್ತೆ ಬಿರಿಯಾನಿ ಬಕೆಟ್​ ಹಿಡಿಯುವ ಸಮಯ ಬಂದಿದೆ! ಕೈದಿ 2 ಚಿತ್ರದ ಬಗ್ಗೆ ಬಿಗ್​ ಅಪ್​ಡೇಟ್​ ಕೊಟ್ಟ ಕಾರ್ತಿ

ಚೆನ್ನೈ: ಸ್ಟಾರ್​​ ಡೈರೆಕ್ಟರ್​ ಲೋಕೇಶ್​ ಕನಗರಾಜ್​ ನಿರ್ದೇಶನದಲ್ಲಿ 2019ರಲ್ಲಿ ತೆರೆಕಂಡ ಕೈದಿ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಕೇವಲ ಒಂದೇ ರಾತ್ರಿಯಲ್ಲಿ ನಡೆಯುವ ಕತೆಯನ್ನು ಲೋಕೇಶ್​ ತುಂಬಾ ಅದ್ಭುತವಾಗಿ ಹೇಳಿದ್ದಾರೆ. ಇಡೀ ಕತೆಯ ಕೇಂದ್ರ ಬಿಂದು ಯಾರೆಂದರೆ ನಟ ಕಾರ್ತಿ. ಕೈದಿಯಾಗಿ ಕಾರ್ತಿ ಅಭಿನಯ ಮನಮೋಹಕವಾಗಿದೆ.

ಬೃಹತ್​ ಡ್ರಗ್ಸ್​ ಜಾಲವನ್ನು ಭೇದಿಸುವ ಪೊಲೀಸರು ದಂದೆಕೋರರ ಬಳಿ ಸಿಲುಕಿದಾಗ ಅವರನ್ನು ರಕ್ಷಣೆ ಮಾಡುವ ಕೈದಿ ಪಾತ್ರದಲ್ಲಿ ಕಾರ್ತಿ ನಟಿಸಿದ್ದಾರೆ. ಇಡೀ ಕತೆ ಒಂದೇ ರಾತ್ರಿಯಲ್ಲಿ ನಡೆಯುತ್ತದೆ. ಆದರೆ, ಎಲ್ಲಿಯೂ ಸಿನಿಮಾ ಬೋರ್​ ಆಗುವುದಿಲ್ಲ ಮತ್ತು ಇಡೀ ಸಿನಿಮಾ ತುಂಬಾ ರೋಚಕತೆಯಿಂದ ಸಾಗುತ್ತದೆ. ಕ್ಲೈಮ್ಯಾಕ್ಸ್​ ದೃಶ್ಯದಲ್ಲಿ ಕೈದಿ 2 ಸಿನಿಮಾ ಬಗ್ಗೆ ನಿರ್ದೇಶಕ ಲೋಕೇಶ್​ ಸುಳಿವು ನೀಡಿದ್ದು, ಎರಡನೇ ಭಾಗ ಯಾವಾಗ ಬರುತ್ತದೆ ಎಂದು ಸಿನಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.

2019ರಲ್ಲಿ ಮೊದಲ ಭಾಗ ಬಿಡುಗಡೆಯಾಗಿ ನಾಲ್ಕು ವರ್ಷ ಸಮೀಪಿಸುತ್ತಿದ್ದರೂ ಎರಡನೇ ಭಾಗ ಇನ್ನೂ ಬಿಡುಗಡೆಯಾಗಿಲ್ಲ. ಹೀಗಾಗಿ ಲೋಕೇಶ್​ ಮತ್ತು ಕಾರ್ತಿ ಎಲ್ಲಿಯೇ ಹೋದರು ಕೈದಿ 2 ಯಾವಾಗ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಲೇ ಇದ್ದರು. ಇದೀಗ ಆ ಪ್ರಶ್ನೆಗೆ ಕೊನೆಗೂ ನಟ ಕಾರ್ತಿ ಉತ್ತರ ನೀಡಿದ್ದಾರೆ.

ಈ ವರ್ಷದಲ್ಲಿ ಕಾರ್ತಿ ಅಭಿನಯದ ಮೀಯಳಗನ್ ಮತ್ತು ವಾ ವಾಥಿಯಾರ್ ಎಂಬ ಎರಡು ಸಿನಿಮಾಗಳು ಬಿಡುಗಡೆಯಾಗಲಿವೆ. ಅಲ್ಲದೆ, ಪಿಎಸ್ ಮಿತ್ರನ್ ನಿರ್ದೇಶನದ ಸರ್ದಾರ್ 2 ಸಿನಿಮಾದ ಚಿತ್ರೀಕರಣ ಕೂಡ ಆರಂಭವಾಗಲಿದೆ. ತಮ್ಮ ಅಭಿಮಾನಿಗಳ ಸಂಘ, ಆಲ್​ ಇಂಡಿಯಾ ಕಾರ್ತಿ ಮಕ್ಕಳ್ ನಳ ಮಂದ್ರಂ ಪರವಾಗಿ ರೋಗಿಗಳಿಗೆ ರಕ್ತದಾನ ಮಾಡಿದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕಾರ್ತಿ, ಕೈದಿ 2 ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ.

ಸರ್ದಾರ್ 2 ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ರೆಡಿಯಾಗಿದ್ದೇನೆ. ಕೈದಿ 2 ಸಿನಿಮಾದಲ್ಲಿ ಲೋಕೇಶ್ ಜೊತೆಗೂಡಿ ಬಿರಿಯಾನಿ ಬಕೆಟ್ ಹಿಡಿದುಕೊಂಡು ಮತ್ತೆ ಕಾಣಿಸಿಕೊಳ್ಳುತ್ತೇನೆ ಎಂದು ಇದೇ ವೇಳೆ ನಗುತ್ತಾ ಹೇಳಿದರು. ಅಂದರೆ, ಮುಂದಿನ ವರ್ಷ ಕೈದಿ 2 ಚಿತ್ರದ ಶೂಟಿಂಗ್​ ಆರಂಭವಾಗಲಿದೆ ಎಂಬ ಸುಳಿವನ್ನು ಕಾರ್ತಿ ಅವರು ನೀಡಿದ್ದಾರೆ. ಈ ಸಿನಿಮಾ ಡ್ರೀಮ್​ ವಾರಿಯರ್​ ಪಿಕ್ಚರ್ಸ್​ ಅಡಿಯಲ್ಲಿ ನಿರ್ಮಾಣವಾಗಲಿದೆ.

ಇನ್ನು ಬಿಡುಗಡೆಗೆ ಸಿದ್ಧವಾಗಿರುವ ವಾ ವಾಥಿಯಾರ್ ಚಿತ್ರದಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿದ್ದಾರೆ. ಸತ್ಯರಾಜ್ ಮತ್ತು ರಾಜ್​ಕಿರಣ್​ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕಾರ್ತಿ ಕೊನೆಯದಾಗಿ ರಾಜು ಮುರುಗನ್ ನಿರ್ದೇಶನದ ಜಪಾನ್ ಚಿತ್ರದಲ್ಲಿ ಕಾಣಿಸಿಕೊಂಡರು. (ಏಜೆನ್ಸೀಸ್​)