ಸಿನಿವಾಣಿ

ಒಂದೇ ಚಿತ್ರದಲ್ಲಿ ತಬು, ಕೃತಿ ಮತ್ತು ಕರೀನಾ ... ಫೆಬ್ರವರಿಯಲ್ಲಿ ಪ್ರಾರಂಭ 'ದಿ ಕ್ರೂ'

ಮುಂಬೈ: ಬಾಲಿವುಡ್​ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಮಹಿಳಾ ಪ್ರಧಾನ ಚಿತ್ರಗಳು ಬರುತ್ತಿವೆ. ಕೆಲವು ವರ್ಷಗಳ ಹಿಂದೆ 'ವೀರೇ ದಿ ವೆಡ್ಡಿಂಗ್​' ಎಂಬ ಚಿತ್ರ ಬಂದಿತ್ತು. ಕರೀನಾ ಕಪೂರ್​, ಸೋನಂ ಕಪೂರ್​, ಸ್ವತಾ ಭಾಸ್ಕರ್​ ಮತ್ತು ಶಿಕಾ ತಲ್ಸಾನಿಯಾ ಎಂಬ ಚಿತ್ರ ಬಂದಿತ್ತು. ಈಗ ಅದೇ ಚಿತ್ರದ ನಿರ್ಮಾಪಕರಿಂದ ಇನ್ನೊಂದು ಹೊಸ ಚಿತ್ರ ಶುರುವಾಗಲಿದ್ದು, ಇದರಲ್ಲಿ ತಬು, ಕರೀನಾ ಕಪೂರ್​ ಮತ್ತು ಕೃತಿ ಸನಾನ್​ ಒಟ್ಟಿಗೆ ಅಭಿನಯಿಸುತ್ತಿದ್ದಾರೆ.

ಬಾಲಿವುಡ್​ನ ಮೂರು ತಲೆಮಾರಿನ ಮೂವರು ಜನಪ್ರಿಯ ನಟಿಯರನ್ನು ಒಂದೇ ಚಿತ್ರದಲ್ಲಿ ಸೇರಿಸುವ ಪ್ರಯತ್ನ ಇದುವರೆಗೂ ಆಗಿರಲಿಲ್ಲ. ಇದೀಗ 'ದಿ ಕ್ರೂ' ಎಂಬ ಹೊಸ ಚಿತ್ರದಲ್ಲಿ ಆಗುತ್ತಿದೆ. ವೈಮಾನಿಕ ಕ್ಷೇತ್ರದಲ್ಲಿ ನಡೆಯುವ ಕಥೆ ಇದಾಗಿದ್ದು, ಈ ಕ್ಷೇತ್ರದ ವಿವಿಧ ಹುದ್ದೆಗಳಲ್ಲಿ ತೊಡಗಿಸಿಕೊಂಡಿರುವ ಮೂವರು ಮಹಿಳೆಯರ ಕಥೆ ಇದಾಗಿರಲಿದೆಯಂತೆ. 'ವೀರೆ ದಿ ವೆಡ್ಡಿಂಗ್​' ಚಿತ್ರವ್ನು ನಿರ್ಮಿಸಿದ್ದ ರಿಯಾ ಕಪೂರ್​ ಮತ್ತು ಏಕ್ತಾ ಕಪೂರ್​ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರಂತೆ.

'ವೀರೇ ದಿ ವೆಡ್ಡಿಂಗ್​' ಚಿತ್ರದ ನಂತರ ಆ ಚಿತ್ರಕ್ಕೆ ಕಥೆ ಬರೆದ ತಂಡವೇ ಈ ಚಿತ್ರದ ಕಥೆ ರೆಡಿ ಮಾಡಿಕೊಂಡಿತಂತೆ. ಮೊದಲು ಕರೀನಾ ಕಪೂರ್​ ಅವರನ್ನು ಸಂಪರ್ಕಿಸಲಾಗಿದೆ. ಅವರು ಒಪ್ಪುತ್ತಿದ್ದಂತೆಯೇ ಕೃತಿ ಮತ್ತು ತಬು ಸಹ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರವಾಗಿದ್ದು, ಮೂವರಿಗೂ ಗ್ಲಾಮರಸ್​ ಪಾತ್ರಗಳು ಇವೆಯಂತೆ.

ಅಂದಹಾಗೆ, 'ದಿ ಕ್ರೂ' ಚಿತ್ರದ ಚಿತ್ರೀಕರಣ 2023ರ ಫೆಬ್ರವರಿಯಲ್ಲಿ ಪ್ರಾರಂಭವಾಗಲಿದ್ದು, ಮುಂದಿನ ವರ್ಷವೇ ಚಿತ್ರ ಬಿಡುಗಡೆಯಾಗಲಿದೆ.