ದೆಹಲಿ: ಲಾಕ್ಡೌನ್ನಿಂದ ಕಳೆದ ಆರು ತಿಂಗಳುಗಳಿಂದ ನಿಂತಿದ್ದ ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಅಭಿನಯದ 'ಲಾಲ್ ಸಿಂಗ್ ಚಡ್ಢಾ' ಚಿತ್ರದ ಚಿತ್ರೀಕರಣ ಕಳೆದ ತಿಂಗಳು ಪ್ರಾರಂಭವಾಗಿತ್ತು. ಶೂಟಿಂಗ್ನಲ್ಲಿ ಭಾಗವಹಿಸುವ ಸಲುವಾಗಿ ಕರೀನಾ ಕಪೂರ್, ಗಂಡ-ಮಗನೊಂದಿಗೆ ದೆಹಲಿಗೆ ಹೋಗಿದ್ದರು.
ಇದೀಗ, 'ಲಾಲ್ ಸಿಂಗ್ ಚಡ್ಢಾ' ಚಿತ್ರದ ಎರಡನೆಯ ಹಂತದ ಚಿತ್ರೀಕರಣ ಸಂಪೂರ್ಣವಾಗಿದೆ. ಅಷ್ಟೇ ಅಲ್ಲ, ಕರೀನಾ ಕಪೂರ್ ಅಭಿನಯದ ದೃಶ್ಯಗಳನ್ನು ಸಹ ಮುಗಿಸಲಾಗಿದೆ. ಇದೀಗ ಚಿತ್ರೀಕರಣ ಮುಗಿಸಿರುವ ಕರೀನಾ, ಚಿತ್ರತಂಡಕ್ಕೆ ಭಾವಪೂರ್ಣ ವಿದಾಯ ಹೇಳಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಬರೆದುಕೊಂಡಿರುವ ಅವರು, 'ಎಲ್ಲಾ ಸುಂದರ ಪಯಣಗಳು ಒಂದಲ್ಲಾ ಒಂದು ದಿನ ಕೊನೆಯಾಗಲೇಬೇಕು. ಅದೇ ರೀತಿ 'ಲಾಲ್ ಸಿಂಗ್ ಚಡ್ಢಾ' ಚಿತ್ರದ ಚಿತ್ರೀಕರಣ ಸಹ ಇಂದು ಕೊನೆಯಾಗಿದೆ' ಎಂದು ಹೇಳಿಕೊಂಡಿದ್ದಾರೆ.
ಚಿತ್ರೀಕರಣ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಹೇಳಿರುವ ಅವರು, 'ನಿಜಕ್ಕೂ ಕಷ್ಟವಿತ್ತು. ಒಂದು ಕಡೆ ಕರೊನಾ, ಇನ್ನೊಂದು ಕಡೆ ಪ್ರೆಗ್ನನ್ಸಿ, ಮತ್ತೊಂದು ಕಡೆ ಭಯ, ಇದೆಲ್ಲದರ ನಡುವೆಯೇ ಚಿತ್ರೀಕರಣ ಮಾಡಬೇಕಿತ್ತು. ಆದರೆ, ಬಹಳ ಪ್ಯಾಶನ್ನಿಂದ ಚಿತ್ರೀಕರಣ ಮುಗಿಸಿದ್ದೇವೆ' ಎಂದು ಅವರು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಚಿತ್ರತಂಡಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ.
ಇದನ್ನೂ ಓದಿ: ಲಾಕ್ಡೌನ್ ನಂತರ ಗರಿಗೆದರಿದ ಬಾಲಿವುಡ್ …
'ಲಾಲ್ ಸಿಂಗ್ ಚಡ್ಢಾ' ಚಿತ್ರವು ಟಾಮ್ ಹ್ಯಾಂಕ್ಸ್ ನಿರ್ದೇಶನದ ಹಾಲಿವುಡ್ ಚಿತ್ರ 'ಫಾರೆಸ್ಟ್ ಗಂಪ್'ನ ರೀಮೇಕ್ ಆಗಿದ್ದು, ಈ ಚಿತ್ರದಲ್ಲಿ ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಅಲ್ಲದೆ, ವಿಜಯ್ ಸೇತುಪತಿ ಸಹ ನಟಿಸಿದ್ದಾರೆ.
ಸದ್ಯ ದೆಹಲಿಯಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡದವರು, ಸದ್ಯದಲ್ಲೇ ಇನ್ನೊಂದು ಹಂತದ ಚಿತ್ರೀಕರಣಕ್ಕೆ ಟರ್ಕಿಗೆ ತೆರಳಲಿದೆ. ಈ ವರ್ಷದ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.