ಸಿನಿವಾಣಿ

ಚಿತ್ರೀಕರಣ ಮುಕ್ತಾಯದತ್ತ ಕರಟಕ ದಮನಕ; ಚಿತ್ರತಂಡದ ಮೊದಲ ಪ್ರೆಸ್ ಮೀಟ್

Bengaluru - Cinema - Pramod Hegde

ಬೆಂಗಳೂರು: ಶಿವರಾಕುಮಾರ್ ಹಾಗೂ ಪ್ರಭುದೇವ ಒಟ್ಟಿಗೆ ನಟಿಸುತ್ತಿರುವ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ‘ಕರಟಕ ದಮನಕ’. ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಚಿತ್ರತಂಡ ಪತ್ರಿಕಾ ಗೋಷ್ಟಿಯನ್ನು ಹಮ್ಮಿಕೊಂಡಿತ್ತು.

ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಯೋಗರಾಜ್ ಭಟ್, ‘ಎರಡು ಕುತಂತ್ರಿ ನರಿಗಳು ಹೇಗೆಲ್ಲ ಸ್ಕಾೃಮ್ ಮಾಡುತ್ತಾರೆ ಎನ್ನುವುದರ ಸುತ್ತ ಕಥೆ ಸಾಗುತ್ತಾದರೂ, ಮುಂದೆ ಅವರ ಜೀವನದಲ್ಲಿ ಏನಾಗುತ್ತದೆ ಎನ್ನುವುದೇ ಕಥೆ. ಡಾರ್ಕ್ ಕಾಮಿಡಿ, ಮನರಂಜನೆ ಜತೆ ಒಂದು ಸಂದೇಶವಿದೆ. ಹಾಡುಗಳ ಭಾಗ ಚಿತ್ರೀಕರಣ ಮುಗಿಸಿದರೆ ಸುಮಾರು ನೂರು ದಿನಗಳ ಶೂಟಿಂಗ್ ಪೂರ್ಣಗೊಳ್ಳುತ್ತದೆ’ ಎಂದು ಮಾಹಿತಿ ನೀಡುತ್ತಾರೆ.

‘ಕರಟಕ’ ಪಾತ್ರ ಮಾಡುತ್ತಿರುವ ಶಿವಣ್ಣ,‘ಮನರಂಜನೆಯ ಜತೆಗೆ ಭಾವನಾತ್ಮಕ ವಿಷಯಗಳಿಗೂ ಯೋಗರಾಜ್ ಭಟ್ ಮಹತ್ವ ನೀಡಿದ್ದಾರೆ. ನಗಿಸುತ್ತಲೇ ಒಂದು ನ್ಯಾಷನಲ್ ಇಶ್ಯೂ ಬಗ್ಗೆ ಬೆಳಕು ಚೆಲ್ಲುತ್ತದೆ. ಸಿನಿಮಾದುದ್ದಕ್ಕೂ ನನ್ನ ಮತ್ತು ಪ್ರಭುದೇವ ಮಧ್ಯೆ ಒಳ್ಳೆಯ ಕೆಮೆಸ್ಟ್ರಿ ಇದೆ’ ಎಂದು ಮಾಹಿತಿ ನೀಡಿದರು. ‘ದಮನಕ’ ಪಾತ್ರದಲ್ಲಿ ಬಣ್ಣ ಹಚ್ಚಿರುವ ಪ್ರಭುದೇವ, ‘ನಟನೆಯ ಜತೆಗೆ ನೃತ್ಯ ನಿರ್ದೇಶನ ಕೂಡ ಮಾಡುತ್ತಿದ್ದೇನೆ.

ಶಿವಣ್ಣ ಹಾಗೂ ಯೋಗರಾಜ್ ಭಟ್ ಜತೆ ಕೆಲಸ ಮಾಡಿ ಖುಷಿಯಾಯಿತು. ಶಿವಣ್ಣ ಟೀಚರ್ ಇದ್ದ ಹಾಗೆ’ ಎಂದು ಹೇಳಿದರು. ಇನ್ನು ಶಿವಣ್ಣ ಅವರಿಗೆ ಜೋಡಿಯಾಗಿ ಪ್ರಿಯಾ ಆನಂದ್, ಪ್ರಭುದೇವಗೆ ನಿಶ್ವಿಕಾ ನಾಯ್ಡು ಜೋಡಿಯಾಗಿದ್ದಾರೆ. ಇವರ ಜತೆಗೆ ತೆಲುಗಿನ ತನಿಕೆಲ್ಲ ಭರಣಿ, ಗೌರವ ಪಾತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ಯೋಗರಾಜ್ ಭಟ್, ರಾಕ್‌ಲೈನ್ ವೆಂಕಟೇಶ್ ಕೂಡ ನಟಿಸಿದ್ದಾರೆ. ಉಳಿದಂತೆ ಚಿತ್ರಕ್ಕೆ ಸಂತೋಷ್ ಪತಾಜೆ ಛಾಯಾಗ್ರಹಣವಿರಲಿದೆ.