ಸಿನಿವಾಣಿ

ಕರಣ್​ ಜೋಹರ್​ಗೂ ಕರೊನಾ ಕಂಟಕ!

ಇತ್ತೀಚೆಗಷ್ಟೇ ಬಾಲಿವುಡ್​ನ ಖ್ಯಾತ ನಿರ್ಮಾಪಕ ಬೋನಿ ಕಪೂರ್​ ಮನೆಯ ಕೆಲಸದವರಿಗೆ ಕರೊನಾ ಪಾಸಿಟಿವ್​ ಪತ್ತೆಯಾಗಿತ್ತು. ಅದಾದ ಬಳಿಕ ಅಧಿಕೃತ ಪ್ರಕಟಣೆ ಹೊರಡಿಸಿದ್ದ ಬೋನಿ ಕಪೂರ್​, ಮನೆ ಮತ್ತು ಮನೆಯಲ್ಲಿರುವವರ ಬಗ್ಗೆಯೂ ಹೇಳಿಕೊಂಡಿದ್ದರು. ಇದೀಗ ಬಾಲಿವುಡ್​ನ ಖ್ಯಾತ ನಿರ್ಮಾಪಕ ಕರಣ್​ ಜೋಹರ್​ಗೂ ಕರೊನಾ ಕಂಟಕ ಶುರುವಾಗಿದೆ. ಅಂದರೆ, ಅವರ ಮನೆಯಲ್ಲಿನ ಇಬ್ಬರು ಕೆಲಸಗಾರರಿಗೆ ಕರೊನಾ ಪಾಸಿಟಿವ್​ ವರದಿ ಬಂದಿದೆ.

ಹಾಗೆ ವರದಿ ಬಂದಿದ್ದೇ ತಡ, ಜಾಲತಾಣದಲ್ಲಿ ಆ ಬಗ್ಗೆ ಬರೆದುಕೊಂಡಿರುವ ಕರಣ್​, ಆ ಇಬ್ಬರು ಕೆಲಸಗಾರರಿಗೆ ತಮ್ಮದೆ ಬಂಗಲೆಯಲ್ಲಿ ಕ್ವಾರಂಟೈನ್​ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ವಿಚಾರವನ್ನು ಬಾಂಬೆ ಮುನ್ಸಿಪಲ್​ ಕಾರ್ಪೋರೇಷನ್​ ಗಮನಕ್ಕೂ ತಂದಿದ್ದು, ಪೂರ್ತಿ ಕಟ್ಟಡಕ್ಕೆ ಕ್ರಿಮಿನಾಶಕ ಸಿಂಪಡಣೆ ಮಾಡಿಸಿದ್ದಾರೆ.

ಇನ್ನುಳಿದಂತೆ ಕುಟುಂಬದವರು ಮತ್ತು ಕೆಲಸಗಾರರ ಕೋವಿಡ್ ಪರೀಕ್ಷೆ ನೆಗೆಟಿವ್​ ಬಂದಿದ್ದು, ಸೋಂಕು ನಿಯಂತ್ರಣಕ್ಕೆ ಮತ್ತು ಅದರ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿರುವ ಬಗ್ಗೆ ಕರಣ್ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)