ಸಿನಿವಾಣಿ

ಟ್ರೋಲಿಗರ ವಿರುದ್ಧ ಸೈಬರ್​ ಕ್ರೈಮ್​ಗೆ ದೂರು ಕೊಡಲು ಕರಣ್​ ತಯಾರಿ

ಸುಶಾಂತ್​ ಸಿಂಗ್​ ಆತ್ಮಹತ್ಯೆ ಕೇಸ್​ನಲ್ಲಿ ಬಾಲಿವುಡ್​ನ ಪ್ರಭಾವಿ ವ್ಯಕ್ತಿಗಳ ಹೆಸರು ತಳುಕು ಹಾಕಿಕೊಂಡಿದ್ದು, ಈ ಪೈಕಿ ಸಲ್ಮಾನ್​ ಖಾನ್​, ಕರಣ್​ ಜೋಹರ್​, ಸಂಜಯ್​ ಲೀಲಾ ಬನ್ಸಾಲಿ ಮುಂತಾದ ಹಲವು ಖ್ಯಾತನಾಮರ ಹೆಸರು ಸೇರಿಕೊಂಡಿರುವುದು ಈ ಒಂದು ತಿಂಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ.

ಅದರಲ್ಲೂ ಸುಶಾಂತ್ ಸಿಂಗ್​ ಸಾವಿನಲ್ಲಿ ಕರಣ್​ ಜೋಹರ್ ಅವರ ಪಾತ್ರದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಕರಣ್​ರಂತಹ ಪ್ರಭಾವಿಗಳು ಸುಶಾಂತ್​ರನ್ನು ದೂರ ಇಟ್ಟ ಕಾರಣ, ಆತ ನೊಂದು ಆತ್ಮಹತ್ಯೆ ದಾರಿ ಹಿಡಿದಿರಬಹುದು ಎಂದು ಹೇಳಲಾಗುತ್ತಿದೆ. ಇದೇ ವಿಷಯವಾಗಿ, ಕರಣ್​ ಸಾಕಷ್ಟು ಟ್ರೋಲ್​ಗೆ ಒಳಗಾಗಿದ್ದಾರೆ.

ಈಗ ತಮ್ಮ ವಿರುದ್ಧ ಸತತವಾಗಿ ಬಿದ್ದಿರುವ ಟ್ರೋಲಿಗರಿಗೆ ಪಾಠ ಕಲಿಸುವುದಕ್ಕೆ ಕರಣ್​ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ತಮಗೆ ಮಾನಸಿಕ ಹಿಂಸೆ ಕೊಡುತ್ತಿರುವವರ ವಿರುದ್ಧ ಮಾಹಿತಿ ಸಂಗ್ರಹಿಸಿ, ಆ ನಂತರ ದೂರು ಕೊಡುವುದಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸುಶಾಂತ್ ಸಾವಿನ ನಂತರ ಕರಣ್​ ವಿರುದ್ಧ ನೆಟ್ಟಿಗರಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಕೆಲವರು ಕರಣ್​ ಬಗ್ಗೆ ಸತತವಾಗಿ ಟ್ರೋಲ್​ ಮಾಡುವುದರ ಜತೆಗೆ, ಅವರಿಗೆ ಜೀವ ಬೆದರಿಕೆಯನ್ನೂ ಹಾಕಿದ್ದರು ಎಂದು ಹೇಳಲಾಗುತ್ತಿದೆ. ಇದರಿಂದ ಕರಣ್​, ಖಿನ್ನತೆಗೆ ಒಳಗಾಗಿದ್ದು, ಅದರಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರಂತೆ.

ಹಾಗಾಗಿ ಈ ವಿರುದ್ಧ ಸೈಬರ್​ ಕ್ರೈಮ್​ಗೆ ಸದ್ಯದಲ್ಲೇ ದೂರು ಕೊಡುವುದಕ್ಕೆ ಕರಣ್​ ಯೋಚಿಸಿದ್ದು, ಅದಕ್ಕೂ ಮೊದಲು, ತಮ್ಮ ವಿರುದ್ಧ ಹರಿಹಾಯ್ದ ಮತ್ತು ಜೀವ ಬೆದರಿಕೆ ಹಾಕಿದ ಮಂದಿಯ ವಿರುದ್ಧ ಮಾಹಿತಿ ಸಂಗ್ರಹಿಸುತ್ತಿದ್ದಾರಂತೆ. ತಮ್ಮನ್ನು ಟ್ರೋಲ್​ ಮಾಡಿದ್ದು ಯಾರು, ಅವರ ಹಿನ್ನೆಲೆ ಏನು, ಅವರಿಂದ ಯಾರಾದರೂ ಈ ತರಹದ ಕೆಲಸ ಮಾಡಿಸುತ್ತಿದ್ದಾರಾ ... ಮುಂತಾದ ಹಲವು ಮಾಹಿತಿಗಳನ್ನು ಸಂಗ್ರಹಿಸುವಲ್ಲಿ ಕರಣ್​ ನಿರತರಾಗಿದ್ದು, ಅದಕ್ಕೊಂದು ತಂಡ ರಚಿಸಿದ್ದಾರಂತೆ. ಆ ತಂಡ ಕೊಟ್ಟ ವರದಿಯನ್ನಿಟ್ಟುಕೊಂಡು ಸೈಬರ್​ ಕ್ರೈಮ್​ ಪೊಲೀಸರಿಗೆ ದೂರು ನೀಡುವುದು ಅವರ ಯೋಚನೆ.

ಇದಕ್ಕೂ ಮುನ್ನ ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿಗೂ ಕೊಲೆ ಮತ್ತು ರೇಪ್​ ಬೆದರಿಕೆಗಳು ಬಂದಿದ್ದು, ಈ ವಿರುದ್ಧ ಅವರು ಸೈಬರ್​ ಕ್ರೈಮ್ ಮೊರೆ ಹೋಗಿದ್ದರು. ಅದಕ್ಕೆ ಸರಿಯಾಗಿ, ರಿಯಾಗೆ ತೊಂದರೆ ಕೊಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.