ಸಿನಿವಾಣಿ

ಕರಣ್​ ಯಾರನ್ನೂ ಹಾಳು ಮಾಡೋಕೆ ಸಾಧ್ಯ ಇಲ್ಲ ... ಹಾಗಂತ ಅನುರಾಗ್​ ಹೇಳಿದ್ದು ಯಾಕೆ?

manjunathktgns

ಒಂದು ಕಡೆ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆಗೆ ಕರಣ್​ ಜೋಹರ್​ ಪರೋಕ್ಷ ಕಾರಣ ಎಂದು ನಟಿ ಕಂಗನಾ ರಣಾವತ್​ ಹಲವು ದಿನಗಳಿಂದ ಹೇಳಿಕೊಂಡು ಬಂದಿದ್ದಾರೆ. ಬಾಲಿವುಡ್​ನಲ್ಲಿ ಸ್ವಜನಪಕ್ಷಪಾತವನ್ನು ಕರಣ್​ ಪೋಷಿಸುತ್ತಿರುವುದರಿಂದ ಬೇರೆ ಯಾರನ್ನೂ ಬೆಳೆಯುವುದಕ್ಕೆ ಬಿಡುವುದಿಲ್ಲ. ಸುಶಾಂತ್​ ಸಿಂಗ್​ ಸಹ ಅವರ ದೌರ್ಜನ್ಯಕ್ಕೆ ಒಳಗಾಗಿ, ಕೊನೆಗೆ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು ಎಂದು ಕಂಗನಾ ಹೇಳಿಕೊಂಡೇ ಬಂದಿದ್ದಾರೆ.

ಕಂಗನಾ ಹೀಗೆ ಪ್ರತಿಪಾದಿಸುತ್ತಿದ್ದರೆ, ನಟ-ನಿರ್ದೇಶಕ ಅನುರಾಗ್​ ಕಶ್ಯಪ್​ ಮಾತ್ರ ಕರಣ್​ ಯಾರನ್ನೂ ಹಾಳು ಮಾಡಿಲ್ಲ, ಯಾರನ್ನೂ ಹಾಳು ಮಾಡುವುದಕ್ಕೂ ಸಾಧ್ಯವಿಲ್ಲ, ಅವರಿಂದ ಬೆಳೆಸುವುದಕ್ಕೆ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.

ಸ್ವಜನಪಕ್ಷಪಾತದ ಕುರಿತಾಗಿ ಒಂದು ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ನಿಜ ಹೇಳಬೇಕೆಂದರೆ, ಈ ಸ್ವಜನಪಕ್ಷಪಾತದ ಚರ್ಚೆ ಬಹಳ ತಡವಾಗಿ ನಡೆಯುತ್ತಿದೆ. ಸುಮಾರು 10 ವರ್ಷಗಳ ಹಿಂದೆ ಈ ಚರ್ಚೆ ನಡೆಯಬೇಕಿತ್ತು. 10 ವರ್ಷಗಳ ಹಿಂದೆ ಇದ್ದಂತ ಪರಿಸ್ಥಿತಿ ಈಗಿಲ್ಲ. ಈಗ ಸಾಕಷ್ಟು ಹೊಸಬರು ಮತ್ತು ಚಿತ್ರರಂಗದವರಿಗೆ ಸಂಬಂಧಿಸಿದವರು ಬರುತ್ತಿದ್ದಾರೆ' ಎಂದು ಹೇಳಿಕೊಂಡಿದ್ದಾರೆ.

'ಕರಣ್​ ಜೋಹರ್​ ಯಾರನ್ನು ಬೇಕಾದರೂ ಚಿತ್ರರಂಗದಲ್ಲಿ ಬೆಳೆಸಬಹುದು. ಏಕೆಂದರೆ, ಅವರು ಒಬ್ಬ ನಿರ್ದೇಶಕನಷ್ಟೇ ಅಲ್ಲ, ಅವರೊಬ್ಬ ವ್ಯಾಪಾರಿ ಸಹ. ಯಾರಿಂದ ಹೇಗೆ ಕೆಲಸ ತೆಗೆಯಬಹುದು ಎನ್ನುವುದು ಚೆನ್ನಾಗಿ ಅವರಿಗೆ ಗೊತ್ತಿದೆ. ಅವರಿಂದ ಯಾರನ್ನೂ ಹಾಳು ಮಾಡುವುದಕ್ಕೆ ಸಾಧ್ಯವೇ ಇಲ್ಲ' ಎಂದು ಅಭಿಪ್ರಾಯಪಡುತ್ತಾರೆ ಅನುರಾಗ್​.

'ಚಿತ್ರರಂಗಕ್ಕೆ ಸಂಬಂಧಿಸಿದವರು ಚಿತ್ರರಂಗಕ್ಕೆ ಬಂದಾಗ, ಸಹಜವಾಗಿಯೇ ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಅದೇ ಒಳಗಿನವರಿಗೆ ಸ್ವಲ್ಪ ಸಲೀಸಾಗುತ್ತದೆ. ಅವರು ಕ್ಯೂನಲ್ಲಿ ನಿಂತು ಆಡಿಷನ್​ನಲ್ಲಿ ಭಾಗವಹಿಸಬೇಕು ಅಂದೇನಿಲ್ಲ. ಆದರೆ, ಹೊರಗಿನವರು ಕ್ಯೂನಲ್ಲಿ ನಿಂತು, ತಮ್ಮ ಸರದಿ ಬರುವವರೆಗೂ ಕಾಯಬೇಕು. ಕಳೆದ 10 ವರ್ಷಗಳಿಗೆ ಹೋಲಿಸಿದರೆ, ಹೊರಗಿನವರಿಗೆ ಸಾಕಷ್ಟು ಅವಕಾಶಗಳು ಸಿಗುತ್ತದೆ. ಆಗ ಇಷ್ಟೊಂದು ಸೋಷಿಯಲ್​ ಮೀಡಿಯಾ ಇರಲಿಲ್ಲ. ಈಗ ದೊಡ್ಡದಾಗಿ ಬೆಳೆದಿದೆ. ಜನ ಚಿತ್ರ ನೋಡಿ, ತಮಗೆ ಇಷ್ಟವಾದವರನ್ನು ತಮ್ಮದೇ ರೀತಿಯಲ್ಲಿ ಬೆಳೆಸುತ್ತಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಅನುರಾಗಗ ಮತ್ತು ಕರಣ್​ ಅವರ ಯೋಚನೆಗಳು ಭಿನ್ನವಾಗಿದ್ದು, ಬೇರೆಬೇರೆ ತರಹದ ಚಿತ್ರಗಳನ್ನೂ ಮಾಡಿದರೂ, ಇಬ್ಬರೂ ಜತೆಗೆ ಕೆಲಸ ಮಾಡಿದ ಕೆಲವು ಉದಾರಣೆಗಳಿವೆ. 'ಬಾಂಬೆ ವೆಲ್ವೆಟ್​' ಎಂಬ ಚಿತ್ರದಲ್ಲಿ ಕರಣ್​ ಜೋಹರ್ ಅವರನ್ನು ಅನುರಾಗ್​ ನಿರ್ದೇಶನ ಮಾಡಿದ್ದರು. ಇನ್ನು 'ಬಾಂಬೆ ಟಾಕೀಸ್​', 'ಲಸ್ಟ್​ ಸ್ಟೋರೀಸ್​' ಮತ್ತು 'ಗೋಸ್ಟ್​ ಸ್ಟೋರೀಸ್​' ಚಿತ್ರಗಳನ್ನು ಇಬ್ಬರೂ ಜತೆಯಾಗಿ ನಿರ್ಮಾಣ ಮಾಡಿದ್ದಾರೆ.