ಸಿನಿವಾಣಿ

ಸುದೀಪ್​ಗೆ ಕಪಿಲ್ ಅಪರೂಪದ ಗಿಫ್ಟ್; ಆಟಗಾರರ ಸಹಿ ಇರುವ ಬ್ಯಾಟ್ ಕಾಣಿಕೆ

‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರಕ್ಕಾಗಿ ಕಳೆದ ಎರಡು ದಿನಗಳಿಂದ ಮುಂಬೈ, ಕೊಚ್ಚಿ, ಚೆನ್ನೈ ಮತ್ತು ಹೈದರಾಬಾದ್ ಪ್ರವಾಸ ಮಾಡಿ ಬೆಂಗಳೂರಿಗೆ ವಾಪಸ್ಸಾದ ಸುದೀಪ್​ಗೆ ಭಾನುವಾರ ಬೆಳಿಗ್ಗೆ ಒಂದು ಅಚ್ಚರಿ ಕಾದಿದೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್, ಸುದೀಪ್​ಗೆ ಒಂದು ಬ್ಯಾಟ್ ಕಳಿಸಿದ್ದು, ಈ ಬ್ಯಾಟ್ ಮೇಲೆ 83ರ ವಿಶ್ವಕಪ್​ನಲ್ಲಿ ಆಡಿದ ಎಲ್ಲಾ ಆಟಗಾರರ ಸಹಿ ಇದೆ.

ತಾನು ಮೆಚ್ಚುವ ಆಟಗಾರ ಕಳಿಸಿರುವ ಈ ಅಪರೂಪದ ಕಾಣಿಕೆಯ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸುದೀಪ್, ‘ಎಂಥಾ ಅದ್ಭುತ ದಿನ ಇದು. ಕಪಿಲ್ ದೇವ್ ಸಾರ್ ಒಂದು ಅಪರೂಪದ ಉಡುಗೊರೆಯನ್ನು ಕಳುಹಿಸಿದ್ದಾರೆ. ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇದೊಂದು ಅದ್ಭುತ ಕಾಣಿಕೆ ಮತ್ತು ಆಕಾಶದಲ್ಲಿ ತೇಲುತ್ತಿರುವ ಅನುಭವ ಆಗುತ್ತಿದೆ. ಥ್ಯಾಂಕ್ಯೂ ಕಪಿಲ್ ಸಾರ್’ ಎಂದು ಸುದೀಪ್ ಹೇಳಿದ್ದಾರೆ.

ಭಾರತ ಕ್ರಿಕೆಟ್ ತಂಡವು 83ರಲ್ಲಿ ವಿಶ್ವಕಪ್ ಗೆದ್ದ ಘಟನೆಯನ್ನಾಧರಿಸಿ ಕೆಲವು ತಿಂಗಳುಗಳ ಹಿಂದೆ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮುಂತಾದವರು ನಟಿಸಿದ್ದ ‘83’ ಎಂಬ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡದವರ ಜತೆಗೆ ಕಪಿಲ್ ದೇವ್, ಶ್ರೀಕಾಂತ್ ಮುಂತಾದವರು ಸಹ ಬೆಂಗಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಸುದೀಪ್, ತಾವು ಕಪಿಲ್ ದೇವ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದರು.