ಬೆಂಗಳೂರು: ರಿಷಭ್ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರವು ಜಗತ್ತಿನಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗಿದ್ದು, ಇದುವರೆಗೂ 280 ಕೋಟಿ ರೂ. ಗಳಿಕೆ ಮಾಡಿದೆ. ಸದ್ಯದಲ್ಲೇ ಚಿತ್ರವು 300 ಕೋಟಿ ರೂ. ಕ್ಲಬ್ ಸೇರಲಿದ್ದು, ಕೆಜಿಎಫ್ 2' ನಂತರ ಅತೀ ಹೆಚ್ಚು ಗಳಿಕೆ ಮಾಡಿದ ಎರಡನೆಯ ಕನ್ನಡ ಚಿತ್ರವಾಗಲಿದೆ.
'ಕಾಂತಾರ' ಚಿತ್ರವು ಸೆ. 30ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದಾಗಿ, ಕನ್ನಡ ಚಿತ್ರವು ಬಿಡುಗಡೆಯಾದ ಎರಡು ವಾರಗಳ ಅಂತರದಲ್ಲಿ ತೆಲುಗು, ತಮಿಳು ಮತ್ತು ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಡಬ್ ಮಾಡಲಾಯಿತು.
ಕನ್ನಡ ಅವತರಣಿಕೆಯೊಂದೇ ಕಳೆದ ಒಂದು ತಿಂಗಳಲ್ಲಿ 120 ಪ್ಲಸ್ ಕೋಟಿ ರೂ.ಗಳನ್ನು ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ. ಹಿಂದಿ ಅವತರಣಿಕೆಯು 45 ಕೋಟಿ ರೂ. ಮತ್ತು ತೆಲುಗು ಅವತರಣಿಕೆಯು 50 ಕೋಟಿ ರೂ.ಗಳ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ತಮಿಳು ಮತ್ತು ಮಲಯಾಳಂ ಅವತರಣಿಕೆಗಳಿಗೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಇದುವರೆಗೂ 'ಕಾಂತಾರ' ಚಿತ್ರವು ಜಗತ್ತಿನಾದ್ಯಂತ 280ಕ್ಕೂ ಹೆಚ್ಚು ಕೋಟಿ ರೂ.ಗಳನ್ನು ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ.
'ಕಾಂತಾರ' ಚಿತ್ರದ ತಮಿಳು ಅವತರಣಿಕೆಯನ್ನು ತಮಿಳುನಾಡಿನಲ್ಲಿ ಡ್ರೀಮ್ ವಾರಿಯರ್ಸ್ ಸಂಸ್ಥೆಯು ಬಿಡುಗಡೆ ಮಾಡಿದೆ. ಮೊದಲ ವಾರ ಕೇವಲ 10 ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಆರಂಭದಲ್ಲಿ ಚಿತ್ರಕ್ಕೆ ಅಷ್ಟೇನೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಕ್ರಮೇಣ ಚಿತ್ರವು ಈಗ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ ಎಂದು ಡ್ರೀಮ್ ವಾರಿಯರ್ಸ್ನ ಎಸ್.ಆರ್. ಪ್ರಭು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್ನ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.