ಸಿನಿವಾಣಿ

ಕಾಂತಾರ ಚಾಪ್ಟರ್​ 1 ಬಗ್ಗೆ ಯಾರಿಗೂ ಗೊತ್ತಿರದ ಕುತೂಹಲಕಾರಿ ಸಂಗತಿ ಬಿಚ್ಚಿಟ್ರು ರಿಷಭ್​ ಶೆಟ್ರು! ಏನದು? Rishab Shetty

Rishab Shetty : ಡಿವೈನ್ ಸ್ಟಾರ್​ ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಾಪ್ಟರ್​ 1 ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ದಸರಾ ಹಬ್ಬದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಕೇವಲ ನಾಲ್ಕೇ ದಿನದಲ್ಲಿ 300 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದೆ. ಸೂಪರ್ ಹಿಟ್ ಚಿತ್ರ ಕಾಂತಾರದ ಪ್ರೀಕ್ವೆಲ್​ ಆಗಿರುವ ಚಾಪ್ಟರ್​ 1 ಭರ್ಜರಿ ಯಶಸ್ಸು ಕಂಡಿದ್ದು, ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಈ ಸಿನಿಮಾ ಕರ್ನಾಟಕದ ಭೂತಕೋಲದ ಪ್ರಾಚೀನ ಕಲೆಯನ್ನು ಆಧರಿಸಿ ಚಿತ್ರೀಕರಿಸಲಾಗಿದೆ.

ಇತ್ತೀಚೆಗೆ, ಈ ಚಿತ್ರದ ಬಗ್ಗೆ ಒಂದು ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಅದೇನೆಂದರೆ, ರಿಷಭ್ ಶೆಟ್ಟಿ ಈ ಚಿತ್ರವನ್ನು ತಮ್ಮ ಸ್ವಂತ ಹಳ್ಳಿಯಲ್ಲೇ ಚಿತ್ರೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಇದಲ್ಲದೆ, ರಿಷಭ್ ಶೆಟ್ಟಿ ಅವರ ಗ್ರಾಮದಲ್ಲೇ ಸಿನಿಮಾದ ಸುಮಾರು 90 ರಷ್ಟು ಎಡಿಟಿಂಗ್​ ಪೂರ್ಣಗೊಂಡಿದೆ ಎಂದು ಸ್ವತಃ ರಿಷಭ್​ ಶೆಟ್ಟಿಯವರೇ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡರು.

ಈ ಚಿತ್ರದ ಶೇ. 90 ರಷ್ಟು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಮ್ಮ ಸ್ವಂತ ಹಳ್ಳಿಯಲ್ಲಿ ನಡೆದವು. ಉಳಿದ ಹತ್ತು ಪ್ರತಿಶತ ಕೆಲಸಕ್ಕಾಗಿ ಮಾತ್ರ ನಾವು ಬೆಂಗಳೂರು ಮತ್ತು ಕೊಚ್ಚಿಗೆ ಭೇಟಿ ನೀಡಿದೆವು. ಈ ಚಿತ್ರಕ್ಕಾಗಿ, ನಾವು ಸಂಗೀತ ನಿರ್ದೇಶಕರನ್ನೂ ನಮ್ಮ ಹಳ್ಳಿಗೆ ಕರೆತಂದು, ಅಲ್ಲಿಯೇ ಸಂಪೂರ್ಣ ರೆಕಾರ್ಡಿಂಗ್ ಅನ್ನು ಪೂರ್ಣಗೊಳಿಸಿದೆವು. ಚಿತ್ರದ ಶೇ. 90 ರಷ್ಟು ಎಡಿಟಿಂಗ್​ ನಮ್ಮ ಹಳ್ಳಿಯಲ್ಲೇ ನಡೆಯಿತು ಎಂದು ರಿಷಭ್​ ಹೇಳಿದ್ದಾರೆ.

ನಮ್ಮ ಹಳ್ಳಿಯಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರೀಕರಣಕ್ಕೆ ಬರುತ್ತಿದ್ದಂತೆ, ಒಂದು ರೀತಿಯಲ್ಲಿ ಅದು ಚಲನಚಿತ್ರ ಪಟ್ಟಣವಾಗಿ ಬದಲಾಯಿತು. ಪ್ರತಿದಿನ ಕನಿಷ್ಠ 100 ವಾಹನಗಳು ಚಿತ್ರೀಕರಣಕ್ಕೆ ಬರುತ್ತಿದ್ದವು. ನಾವು ಪ್ರತಿದಿನ ಸೆಟ್‌ನಲ್ಲಿ ಸಾವಿರ ಜನರನ್ನು ಇರಿಸಿಕೊಂಡಿದ್ದೆವು. ನಾನು, ನನ್ನ ಹೆಂಡತಿ ಮತ್ತು ಮಗುವಿನೊಂದಿಗೆ ಕಾಂತಾರಕ್ಕಾಗಿ ನನ್ನ ಊರಿನಲ್ಲೇ ಬೀಡುಬಿಟ್ಟಿದ್ದೆ ಎಂದು ತಿಳಿಸಿದ್ದಾರೆ.

ಅಂದಹಾಗೆ, ಕಾಂತಾರ: ಚಾಪ್ಟರ್​ 1 ಕೇವಲ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ 300 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಚಿತ್ರ ಅಕ್ಟೋಬರ್ 2 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)