ಸಿನಿವಾಣಿ

ಒಟಿಟಿಗೆ ಕನ್ನಡಿಗ; ಡಿ. 17ರಂದು ಜೀ5ನಲ್ಲಿ ಬಿಡುಗಡೆ..

ಬೆಂಗಳೂರು: ರವಿಚಂದ್ರನ್ ಅಭಿನಯದ ‘ದೃಶ್ಯ 2’ ಕಳೆದ ಶುಕ್ರವಾರವಷ್ಟೇ ಬಿಡುಗಡೆಯಾಗಿದೆ. ಈ ಶುಕ್ರವಾರ (ಡಿ.17) ರವಿಚಂದ್ರನ್ ಅಭಿನಯದ ‘ಕನ್ನಡಿಗ’ ಬಿಡುಗಡೆಯಾಗುತ್ತಿದೆ. ವ್ಯತ್ಯಾಸ ಇಷ್ಟೇ. ‘ದೃಶ್ಯ 2’ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದರೆ, ‘ಕನ್ನಡಿಗ’ ನೇರವಾಗಿ ಜೀ5 ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

‘ಕನ್ನಡಿಗ’ ಚಿತ್ರವು ಕಳೆದ ವರ್ಷವೇ ಪ್ರಾರಂಭವಾಗಿ, ಕಳೆದ ವರ್ಷವೇ ಮುಗಿದು ಸೆನ್ಸಾರ್ ಸಹ ಆಗಿತ್ತು. ಆ ನಂತರ ಚಿತ್ರಕ್ಕೆ ಎರಡು ಹಾಡುಗಳನ್ನು ಸೇರಿಸುವ ತೀರ್ವನವಾಯಿತು. ಜತೆಗೆ, ರವಿಚಂದ್ರನ್ ಅವರಿಂದ ಡಬ್ಬಿಂಗ್ ಮಾಡಿಸಲಾಯಿತು. ಎರಡು ತಿಂಗಳ ಹಿಂದೆ ಡಬ್ಬಿಂಗ್ ಸಹ ಮುಗಿದಿದ್ದು, ಮತ್ತೊಮ್ಮೆ ಸೆನ್ಸಾರ್ ಮಾಡಿಸಿ, ರಾಜ್ಯೋತ್ಸವದ ಅಂಗವಾಗಿ ನವೆಂಬರ್ ಒಂದರಂದು ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ಮುಂದಾಗಿತ್ತು. ಆದರೆ, ಇದೀಗ ಚಿತ್ರವು ಚಿತ್ರ ಮಂದಿರ ಬದಲಿಗೆ, ಒಟಿಟಿಯಲ್ಲಿ ತೆರೆಕಾಣುತ್ತಿದೆ.

ಮೊದಲ ಸ್ವಾತಂತ್ರ್ಯ ಸಂಗ್ರಾಮ ನಂತರದ ವರ್ಷಗಳಲ್ಲಿ ನಡೆಯುವ ಈ ಕಥೆಯಲ್ಲಿ ರವಿಚಂದ್ರನ್ ಅವರು ಲಿಪಿಕಾರನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ವಿಶೇಷವೆಂದರೆ, ರವಿಚಂದ್ರನ್ ಬಹಳ ವರ್ಷಗಳ ನಂತರ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು. ಲಿಪಿಕಾರ ಗುಣಭದ್ರ ಪಾತ್ರದ ಜತೆಗೆ, ಅವನ ಪೂರ್ವಿಕ ಸಮಂತಭದ್ರನಾಗಿಯೂ ಅವರು ಕಾಣಿಸಿಕೊಂಡಿದ್ದಾರೆ. 30 ವರ್ಷಗಳ ಹಿಂದೆಯೇ, ‘ಕನ್ನಡಿಗ’ ಎಂಬ ಹೆಸರಿನ ಚಿತ್ರದಲ್ಲಿ ನಟಿಸಬೇಕು ಎಂದು ರವಿಚಂದ್ರನ್ ಆ ಹೆಸರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಮಾಡಿಸಿದ್ದರಂತೆ. ಆದರೆ, ಸಿನಿಮಾ ಮಾಡೋಕೆ ಆಗಿರಲಿಲ್ಲ. ಈಗ ಅದೇ ಹೆಸರಿನ ಚಿತ್ರದಲ್ಲಿ ರವಿಚಂದ್ರನ್ ನಟಿಸಿದ್ದಾರೆ.

ಇನ್ನು, ರಾಣಿ ಚೆನ್ನಭೈರಾದೇವಿಯಾಗಿ ಭವಾನಿ ಪ್ರಕಾಶ್ ಅಭಿನಯಿಸಿದ್ದಾರೆ. ಮಿಕ್ಕಂತೆ ಅಚ್ಯುತ್ ಕುಮಾರ್, ರಾಕ್​ಲೈನ್ ವೆಂಕಟೇಶ್, ಬಾಲಾಜಿ ಮನೋಹರ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರಕ್ಕಾಗಿ 30 ದಿನಗಳ ಕಾಲ ಚಿಕ್ಕಮಗಳೂರು, ಸಾಗರ, ಬೆಂಗಳೂರು ಸೇರಿ ಹಲವೆಡೆ ಚಿತ್ರೀಕರಣ ಮಾಡಲಾಗಿದೆ.