ಸಿನಿವಾಣಿ

ದುರ್ಗದಲ್ಲಿ ಮಾರ್ಗರೇಟ್, ರಾಮಾಚಾರಿ; ಮೊದಲ ಶೆಡ್ಯುಲ್ ಪೂರ್ಣಗೊಳಿಸಿದ ಅಭಿಲಾಷ್, ಸೋನಲ್

ಬೆಂಗಳೂರು: ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಟ ಅಭಿಲಾಷ್. ‘ಕೆಜಿಎಫ್’, ‘ಲವ್ ಮಾಕ್ಟೇಲ್’, ‘ಬಡವ ರಾಸ್ಕಲ್’, ‘ಹೊಯ್ಸಳ’ ಸೇರಿ ಕೆಲವು ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿ ಇದೀಗ ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಮೂಲಕ ನಾಯಕನಾಗಿ ಡೆಬ್ಯೂ ಮಾಡಿದ್ದಾರೆ. ಚಿತ್ರದಲ್ಲಿ ಅವರಿಗೆ ‘ಪಂಚತಂತ್ರ’, ‘ಬನಾರಸ್’ ಖ್ಯಾತಿಯ ಸೋನಲ್ ಮೊಂಟೆರೋ ನಾಯಕಿಯಾಗಿದ್ದಾರೆ.

ಗಿರಿಧರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇತ್ತೀಚೆಗಷ್ಟೆ ಚಿತ್ರತಂಡ ಚಿತ್ರದುರ್ಗದಲ್ಲಿ 21 ದಿನಗಳ ಮೊದಲ ಶೆಡ್ಯುಲ್ ಪೂರ್ಣಗೊಳಿಸಿದೆ. ‘ಚಿತ್ರೀಕರಣ ಸರಾಗವಾಗಿ ಸಾಗಲು ಗ್ರಾಮಸ್ಥರೇ ಕಾರಣ. ಇಡೀ ಊರೇ ಶೂಟಿಂಗ್‌ಗೆ ಸಹಕಾರ ನೀಡಿತು’ ಎಂದು ಸಂತಸ ಹಂಚಿಕೊಳ್ಳುತ್ತಾರೆ ಅಭಿಲಾಷ್.

‘ನಾಗರಹಾವು’ ಸಿನಿಮಾದ ಪಾತ್ರಗಳನ್ನು ಹೋಲುವ ರೀತಿಯೇ, ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಚಿತ್ರದಲ್ಲಿ ರಾಮಾಚಾರಿ ಅಲಿಯಾಸ್ ರಾಮು ಪಾತ್ರದಲ್ಲಿ ಅಭಿಲಾಷ್, ಮೀರಾ ರಾಘವರಾಮ್ ಅಲಿಯಾಸ್ ಮ್ಯಾಗಿ ಪಾತ್ರದಲ್ಲಿ ಸೋನಲ್ ಹಾಗೂ ಜಯಂತ್ ಅಲಿಯಾಸ್ ಜಲೀಲನ ಪಾತ್ರದಲ್ಲಿ ಯಶ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ಜಹಾಂಗೀರ್, ಸುಮನ್ ಪ್ರಮುಖ ತಾರಾಗಣದಲ್ಲಿದ್ದಾರೆ. ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ಎರಡನೇ ಹಂತದ ಶೂಟಿಂಗ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.