ಈ ಹಿಂದೆ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರವನ್ನು ನಿರ್ಮಿಸಿದ್ದ ಮತ್ತು ಇದೀಗ ಪ್ರಜ್ವಲ್ ಅಭಿನಯದ 'ವೀರಂ' ಚಿತ್ರವನ್ನು ನಿರ್ಮಿಸುತ್ತಿರುವ ಕೆ.ಎಂ. ಶಶಿಧರ್, ಈ ಮಧ್ಯೆ 'ಶುಗರ್ಲೆಸ್' ಎಂಬ ಚಿತ್ರವನ್ನು ನಿರ್ದೇಶಿಸವುದಾಗಿ ಹೇಳಿಕೊಂಡಿದ್ದರು. ಇದೀಗ ಅವರು ಸದ್ದಿಲ್ಲದೆ ಚಿತ್ರವನ್ನು ಪ್ರಾರಂಭಿಸಿದ್ದಾರೆ.
ಇಂದು ಪ್ರಶಾಂತ್ ನಗರದ ರಾಯರ ಮಠದಲ್ಲಿ 'ಶುಗರ್ಲೆಸ್' ಚಿತ್ರದ ಮುಹೂರ್ತವಾಗಿದೆ. ಚಿತ್ರವನ್ನು ಅರ್ಪಿಸುತ್ತಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಾಯಕ ಪೃಥ್ವಿ ಅಂಬರ್, ನಾಯಕಿ ಪ್ರಿಯಾಂಕಾ ತಿಮ್ಮೇಶ್, ಧರ್ಮಣ್ಣ, ರಘು ರಾಮನಕೊಪ್ಪ ಸೇರಿದಂತೆ ಹಲವರು ಈ ಮುಹೂರ್ತದಲ್ಲಿ ಭಾಗವಹಿಸಿದ್ದಾರೆ. ನಟ-ನಿರ್ದೇಶಕ ಗುರುಪ್ರಸಾದ್ ಅವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದಾರೆ.
ಈ ಕುರಿತು ಮಾತನಾಡುವ ಶಶಿಧರ್, 'ಚಿತ್ರವನ್ನು ಸೆಪ್ಟೆಂಬರ್ 10ರಂದು ಪ್ರಾರಂಭಿಸುವುದಕ್ಕೆ ಯೋಚನೆ ಇತ್ತು. ಆದರೆ, ಆಗ ಪಿತೃಪಕ್ಷವಿರುವುದರಿಂದ, ಸಾಮಾನ್ಯವಾಗಿ ಹೊಸ ಚಿತ್ರಗಳ ಸೆಟ್ಟೇರುವುದಿಲ್ಲ. ಈಗ ಬಿಟ್ಟರೆ, ಇನ್ನೊಂದು ತಿಂಗಳು ಮುಹೂರ್ತಕ್ಕಾಗಿ ಕಾಯಬೇಕಾಗುತ್ತದೆ. ಅದೇ ಕಾರಣಕ್ಕೆ, ಚಿತ್ರದ ಮುಹೂರ್ತವನ್ನು ಸರಳವಾಗಿ ಮುಗಿಸಿದ್ದೇವೆ. ಸೆಪ್ಟೆಂಬರ್ 10ರಿಂದ ಚಿತ್ರೀಕರಣ ಪ್ರಾರಂಭವಾಲಿದೆ' ಎನ್ನುತ್ತಾರೆ ಅವರು.
ಯುವಕನೊಬ್ಬನಿಗೆ ಚಿಕ್ಕ ವಯಸ್ಸಿನಲ್ಲೇ ಸಕ್ಕರೆ ಖಾಯಿಲೆ ಬಂದರೆ, ಅವನು ಅದನ್ನು ಏನೆಲ್ಲಾ ಅನುಭವಿಸುತ್ತಾನೆ ಎಂಬುದನ್ನು ಈ ಚಿತ್ರವನ್ನು ಹಾಸ್ಯಮಯವಾಗಿ ಹೇಳಲಾಗುತ್ತದಂತೆ. ಚಿತ್ರವನ್ನು ನಿರ್ದೇಶಿಸುವುದುರ ಜತೆಗೆ ಶಶಿಧರ್ ಅವರೇ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿದ್ದಾರೆ. ಪೃಥ್ವಿ, ಪ್ರಿಯಾಂಕಾ ಜತೆಗೆ ಧರ್ಮಣ್ಣ, ದತ್ತಣ್ಣ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಂದಹಾಗೆ, ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ಅರ್ಪಿಸುತ್ತಿರುವುದಷ್ಟೇ ಅಲ್ಲ, ವಿತರಣೆ ಸಹ ಮಾಡುತ್ತಿದ್ದಾರೆ.