ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ಜತೆಗೆ ಇಂದು ನಡೆಯಬೇಕಿದ್ದ ಕನ್ನಡ ಚಿತ್ರರಂಗದ ಸಭೆ ಮುಂದೂಡಲ್ಪಟ್ಟಿದೆ.
ಇದನ್ನೂ ಓದಿ: ಬಾಲಿವುಡ್ ತಾರೆಯರ ರಕ್ಷಾಬಂಧನ…
ಕರೊನಾ ಮತ್ತು ಲಾಕ್‌ಡೌನ್‌ನಿಂದ ಕಳೆದ ಕೆಲವು ತಿಂಗಳುಗಳಲ್ಲಿ ಕನ್ನಡ ಚಿತ್ರರಂಗ ಸಾಕಷ್ಟು ತತ್ತರಿಸಿದೆ. ಚಿತ್ರೀಕರಣ, ಚಿತ್ರಪ್ರದರ್ಶನ ಸ್ಥಗಿತಗೊಂಡಿದ್ದರೆ, ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ನಿರ್ಮಾಪಕರ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳು, ಶಿವರಾಜಕುಮಾರ್ ಅವರಿಗೆ ಚಿತ್ರರಂಗದ ನಾಯಕತ್ವ ವಹಿಸಿಕೊಂಡು ಮುನ್ನಡೆಸಬೇಕು ಎಂದು ಮನವಿ ಮಾಡಿಕೊಂಡಿದ್ದವು.
ಶಿವರಾಜಕುಮಾರ್ ಸಹ ಇದಕ್ಕೆ ಒಪ್ಪಿ ಕಳೆದ ವಾರ ತಮ್ಮ ಮನೆಯಲ್ಲಿ ಸಭೆ ಕರೆದಿದ್ದರು. ಈ ಸಭೆಯಲ್ಲಿ ಕನ್ನಡದ ಪ್ರಮುಖ ನಟರು ಮತ್ತು ನಿರ್ಮಾಪಕರು ಭಾಗವಹಿಸಿದ್ದರು. ಈ ಸಭೆಯಲ್ಲಿ ಶಿವರಾಜಕುಮಾರ್, ರವಿಚಂದ್ರನ್, ಉಪೇಂದ್ರ, ರಮೇಶ್ ಅರವಿಂದ್, ಪುನೀತ್ ರಾಜಕುಮಾರ್, ಶ್ರೀಮುರಳಿ, ಯಶ್, ಗಣೇಶ್, 'ದುನಿಯಾ' ವಿಜಯ್, ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್, ಜಯಣ್ಣ, ಪುಷ್ಕರ್ ಮಲ್ಲಿಕಾರ್ಜುನಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.
ಈ ಸಭೆಯಲ್ಲಿ ಚಿತ್ರರಂಗದ ಪುನಶ್ಚೇತನದ ಬಗ್ಗೆ ಚರ್ಚೆ ನಡೆಯಿತು. ಆ ನಂತರ, ಚಿತ್ರರಂಗದ ಪರಿಸ್ಥಿತಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರಿಗೂ ವಿವರಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಚಿವರು, ಮುಖ್ಯಮಂತ್ರಿಗಳ ಜತೆಗೆ ಚಿತ್ರರಂಗದ ನಿಯೋಗದ ಸಭೆಯನ್ನು ಶೀಘ್ರದಲ್ಲೇ ಆಯೋಜಿಸುವುದಾಗಿ ಹೇಳಿದ್ದರು.
ಅದರಂತೆ ಇಂದು ಮಹತ್ವದ ಸಭೆ ನಡೆಯಬೇಕಿತ್ತು. ಆದರೆ, ಮುಖ್ಯಮಂತ್ರಿಗಳ ಕರೊನಾ ಸೋಂಕು ದೃಢಪಟ್ಟಿರುವ ಮತ್ತು ಸದ್ಯ ಕ್ವಾರಂಟೈನ್‌ನಲ್ಲಿರುವ ಹಿನ್ನೆಲೆಯಲ್ಲಿ ಸಭೆ ಅನಿರ್ಧಿಷ್ಟಾವಧಿ ಮುಂದೂಡಲಾಗಿದೆ.