ಸಿನಿವಾಣಿ

25 ವರ್ಷಗಳ ಹಿಂದಿನ ಮಧುರ ನೆನಪನ್ನು ಮೆಲುಕು ಹಾಕಿದ ನಾಗತಿಹಳ್ಳಿ

ಬೆಂಗಳೂರು: ನಾಗತಿಹಳ್ಳಿ ಚಂದ್ರಶೇಖರ್​ ಅವರ ಸೂಪರ್​ ಹಿಟ್​ ಸಿನಿಮಾಗಳಲ್ಲೊಂದು, ರಮೇಶ್​ ಅರವಿಂದ್​ ಮತ್ತು ಹೇಮಾ ಪಂಚಮುಖಿ ಅಭಿನಯದ 'ಅಮೆರಿಕಾ ಅಮೆರಿಕಾ'. ಈ ಚಿತ್ರವು ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದರ ಜೊತೆ, ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಚಿತ್ರ, ನಟ ಮತ್ತು ಕಥೆ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು.

ಈಗ್ಯಾಕೆ ಈ ವಿಷಯವೆಂದರೆ, 'ಅಮೆರಿಕಾ ಅಮೆರಿಕಾ' ಚಿತ್ರದ ಮುಹೂರ್ತವಾಗಿ ಇಂದಿಗೆ 25 ವರ್ಷಗಳಾಗಿವೆ. 25 ವರ್ಷಗಳ ಹಿಂದೆ ಸರಿಯಾಗಿ ಇದೇ ದಿನದಂದು (ಜೂನ್​ 16, 1996) ಈ ಚಿತ್ರ ಪ್ರಾರಂಭವಾಗಿತ್ತು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ರವೀಂದ್ರನಾಥ್ ಎಂಬುವವರ ಮನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗುವುದರ ಮೂಲಕ, ವಿದೇಶದಲ್ಲಿ ಮುಹೂರ್ತವಾಚರಿಸಿಕೊಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

ಈಗ ಈ ಚಿತ್ರದ ಪ್ರಾರಂಭೋತ್ಸವಕ್ಕೆ 25 ವರ್ಷಗಳಾಗಿದ್ದು, ಈ ನೆನಪಲ್ಲಿ ನಾಗತಿಹಳ್ಳಿ ಚಂದ್ರಶೇಖರ್​, ಸೋಷಿಯಲ್​ ಮೀಡಿಯಾದಲ್ಲೊಂದು ವಡಿಯೋ ಹಂಚಿಕೊಂಡಿದ್ದಾರೆ. ಚಿತ್ರತಂಡ, ಅಮೆರಿಕನ್ನಡಿಗರು, ಉದ್ಯಮ ಮತ್ತು ಎಲ್ಲ ಪ್ರೇಕ್ಷಕರಿಗೂ ಕಾಲು ಶತಮಾನದ ಕೃತಜ್ಱತೆಗಳನ್ನು ಅವರು ಅರ್ಪಿಸಿದ್ದಾರೆ. ಈ ವಿಡಿಯೋ ಮೂಲಕ 25 ವರ್ಷಗಳ ಹಿಂದಿನ ಮಧುರ ನೆನಪನ್ನು ಮೆಲುಕು ಹಾಕಿದ್ದಾರೆ.

'ಅಮೆರಿಕಾ ಅಮೆರಿಕಾ' ಚಿತ್ರದ ಇನ್ನೊಂದು ವಿಶೇಷತೆಯೆಂದರೆ, ಈ ಚಿತ್ರದ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ರಮೇಶ್ ಅರವಿಂದ್ ಮತ್ತು ಹೇಮಾ ಪಂಚಮುಖಿ ಅವರ ಜತೆಗೆ ಅಕ್ಷಯ್​ ಆನಂದ್​, ದತ್ತಣ್ಣ, ವೈಶಾಲಿ ಕಾಸರವಳ್ಳಿ ಸೇರಿದಂತೆ ಹಲವರು ನಟಿಸಿದ್ದರು. ಈ ಚಿತ್ರವನ್ನು ವಿಶ್ವಪ್ರಿಯ ಫಿಲಂಸ್​ ಸಂಸ್ಥೆಯಡಿ ಜಿ. ನಂದಕುಮಾರ್​ ನಿರ್ಮಿಸಿದ್ದರು.