ಬೆಂಗಳೂರು: ಚಿತ್ರರಂಗದಲ್ಲಿ ಅತ್ಯಂತ ಮಾಮೂಲಿ ವಿಷಯವೆಂದರೆ ಅದು ಗಿವ್ ಆಂಡ್ ಟೇಕ್ ಪಾಲಿಸಿ. ಈ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರು ಆ ಭಾಷೆಗೆ ಹೋಗುವುದು, ಅಲ್ಲಿನವರು ಇಲ್ಲಿಗೆ ಬರುವುದು ಹೊಸದೇನಲ್ಲ. ಆದರೆ, ನಾಯಕಿಯರ ವಿಚಾರದಲ್ಲಿ ಗೀವ್ಗಿಂಥ ಟೇಕ್ ಹೆಚ್ಚಿತ್ತು. ಏಕೆಂದರೆ, ಇಲ್ಲಿಯವರೆಗೂ ಕನ್ನಡದಿಂದ ಬೇರೆ ಭಾಷೆಗಳಿಗೆ ಹೋಗಿ ದೊಡ್ಡ ಹೆಸರು ಮಾಡಿದವರಿಗಿಂತ, ಅಲ್ಲಿಂದ ಇಲ್ಲಿಗೆ ಬಂದು ಮಿಂಚಿರುವ ಸಂಖ್ಯೆಯೇ ಹೆಚ್ಚು.
ನಭಾ ನಟೇಶ್ ಅಭಿನಯದ ‘ಸೋಲೋ ಬ್ರತುಕೆ ಸೋ ಬೆಟರ್’ ಎಂಬ ತೆಲುಗು ಚಿತ್ರ ಬಿಡುಗಡೆಗೆ ಸಿದ್ಧವಿದ್ದರೆ, ‘ಅಲ್ಲುಡು ಅಧುರ್ಸ್’ ಮತ್ತು ‘ಅಂಧಾಧುನ್’ನ ತೆಲುಗು ರೀಮೇಕ್ನಲ್ಲಿ ನಟಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ, ‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್’ ಎಂಬ ಚಿತ್ರದಲ್ಲಿ ನೇಹಾ ಶೆಟ್ಟಿ ನಟಿಸುತ್ತಿರುವ ಸುದ್ದಿ ಇತ್ತು. ಈಗ ಅದರ ಜತೆಗೆ, ‘ರೌಡಿ ಬೇಬಿ’ ಎಂಬ ಇನ್ನೊಂದು ತೆಲುಗು ಚಿತ್ರ ಸಹ ಸೇರಿಕೊಂಡಿದೆ. ಇದು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸುತ್ತಿರುವ ನಟಿಯರ ಸುದ್ದಿಯಾದರೆ, ಕೃತಿ ಖರಬಂದ ಹಿಂದಿ ಚಿತ್ರರಂಗಕ್ಕೆ ಹೋಗಿಯೇ ಐದು ವರ್ಷಗಳಾಗಿವೆ. ಈಗಾಗಲೇ ಅಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಅವರು, ‘14 ಫೇರೇ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ‘ಭುಜ್: ದಿ ಪ್ರೖೆಡ್ ಆಫ್ ಇಂಡಿಯಾ’ ಚಿತ್ರದಲ್ಲಿ ನಟಿಸಿರುವ ಪ್ರಣೀತಾ ಸುಭಾಶ್, ಪ್ರಿಯದರ್ಶನ್ ನಿರ್ದೇಶನದ ‘ಹಂಗಾಮಾ 2’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಕನ್ನಡದ ನಟಿಯರು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದು ಹೊಸದೇನಲ್ಲ ಮತ್ತು ಅದರಲ್ಲಿ ವಿಶೇಷತೆಯೂ ಇಲ್ಲ. ಈಗಾಗಲೇ ಸಾಕಷ್ಟು ಕನ್ನಡತಿಯರು ಬೇರೆ ಭಾಷೆಗಳಲ್ಲಿ ಮಿಂಚಿದ್ದಾಗಿದೆ. ಆದರೆ, ಹಿಂದೆಂದೂ ಕನ್ನಡದ ನಟಿಯರು ಪರಭಾಷೆಗಳಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಗುರುತಿಸಿಕೊಂಡಿರಲಿಲ್ಲ ಎನ್ನುವುದು ವಿಶೇಷ.