Kichcha Sudeepa Celebrates Milestones Of Huchcha And Eega
- ಹುಚ್ಚ ಹಾಗೂ ಈಗ ಸಿನಿಮಾ ಬಗ್ಗೆ ಸುದೀಪ್ ಬಗ್ಗೆ ವಿಶೇಷ ಪೋಸ್ಟ್ ಹಂಚಿಕೊಂಡ ಸುದೀಪ್
- ಎರಡು ಮರೆಯಲಾಗದಂತಹ ಸಿನಿಮಾ ಕೊಟ್ಟಿದ್ದಕ್ಕೆ ಧನ್ಯವಾದ ಎಂದು ಪೋಸ್ಟ್
- ಈಗ ಹಾಗೂ ಹುಚ್ಚ ಸಿನಿಮಾ ಅವರಿಗೆ ಹೊಸ ಅಧ್ಯಾಯ ತೆರೆದಿಟ್ಟ ಸಿನಿಮಾವಾಗಿದೆ
Kichcha Sudeepa Celebrates Milestones Of Huchcha And Eega: ಅಭಿನಯ ಚಕ್ರವರ್ತಿ ಸುದೀಪ್ಗೆ ಕಿಚ್ಚ ಎನ್ನುವ ಹೆಸರು ಶಾಶ್ವತವಾಗಿ ಗಿಫ್ಟ್ ಆಗಿ ಕೊಟ್ಟ ಸಿನಿಮಾ ಹುಚ್ಚ, ನಾಯಕನಾಗಿಯೂ ಸೈ, ಖಳನಾಯಕನಾಗಿ ನಟಿಸಲು ಸೈ ಎಂದು ಸಾಬೀತು ಪಡಿಸಿದ 'ಈಗ' ಸಿನಿಮಾ ಇಂದು ಮೈಲಿಗಲನ್ನು ತಲುಪಿದೆ. ಎರಡು ಸಿನಿಮಾಗಳು ಸುದೀಪ್ ಅವರಿಗೆ ಬಹುದೊಡ್ಡ ತಿರುವು ತಂದುಕೊಟ್ಟಿವೆ. ಸದ್ಯ ಆ ಬಗ್ಗೆ ಸುದೀಪ್ ಅವರು ಎಕ್ಸ್ನಲ್ಲಿ ವಿಶೇಷ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
ಸುದೀಪ್ ಪೋಸ್ಟ್ನಲ್ಲಿ ಏನಿದೆ?
'ಹುಚ್ಚ ಮತ್ತು ಈಗ ಎರಡು ಸಿನಿಮಾ ನನಗೆ ಮರೆಯಲಾಗದ ರತ್ನಗಳಿದ್ದಂತೆ. ಇವನ್ನು ನನಗೆ ಉಡುಗೊರೆಯಾಗಿ ನೀಡಿದ್ದಕ್ಕೆ ಪ್ರತಿಯೊಬ್ಬರಿಗೂ ಧನ್ಯವಾದ. ಇದು ಎಂದೆಂದಿಗೂ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿದೆ' ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ಈಗ ಮತ್ತು ಹುಚ್ಚ ಸಿನಿಮಾದ ಹೆಸರಿನ ಫ್ಲ್ಯಾಗ್ ಹಿಡಿದು ಎತ್ತರದ ಕಟ್ಟಡವೊಂದರಲ್ಲಿ ನಿಂತಿರುವ ಫೋಟೋ ಇದೆ,
ಹುಚ್ಚ ಸಿನಿಮಾಗೆ 25 ವರ್ಷ
ಓಂ ಪ್ರಕಾಶ್ ರಾವ್ ನಿರ್ದೇಶದ ಹುಚ್ಚ ಸಿನಿಮಾ ತಮಿಳಿನ ಸೇತು ಎನ್ನುವ ಚಿತ್ರದ ರಿಮೇಕ್ ಆಗಿದೆ. 2001 ಜು.6ರಂದು ಹುಚ್ಚ ಸಿನಿಮಾ ರಿಲೀಸ್ ಆಗಿತ್ತು. ಇಂದಿಗೆ ಈ ಸಿನಿಮಾ 25 ವರ್ಷ ತುಂಬಿದೆ, ತಮಿಳಿನಲ್ಲಿ ವಿಕ್ರಂ ನಾಯಕನಾಗಿ ನಟಿಸಿದ್ದರೆ, ಕನ್ನಡದಲ್ಲಿ ಸುದೀಪ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ಇನ್ನು ರೇಖಾ ಸರಳ, ಮುಗ್ಧ ನಾಯಕಿಯಾಗಿ ನಟಿಸಿ ಪಾತ್ರಕ್ಕೆ ಜೀವ ತುಂಬಿ ವೀಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು. ಸಿನಿಮಾದ ಪ್ರತಿಯೊಂದು ಹಾಡು ಅದರಲ್ಲಿಯೂ ಉಸಿರೆ ಉಸಿರೆ ಹಾಡು ಇಂದಿಗೂ ಕೇಳುಗರಿಗೆ ಮೆಚ್ಚುಗೆಯ ಹಾಡಾಗಿದೆ
ಈಗಗೆ 14 ವರ್ಷ
ಪ್ರತೀ ಸಿನಿಮಾವನ್ನು ಬ್ಲಾಕ್ ಬ್ಲಸ್ಟರ್ ಹಿಟ್ ಮಾಡುವಂತೆ ನಿರ್ದೇಶಿಸುವ ಎಸ್ ಎಸ್ ರಾಜಮೌಳಿ ಅವರ ಈಗ ಸಿನಿಮಾ 2012 ಜುಲೈ 6 ರಂದು ರಿಲೀಸ್ ಆಗಿತ್ತು. ಭಾರತೀಯ ಚಿತ್ರರಂಗವೇ ಸುದೀಪ್ ಅವರತ್ತ ನೋಡುವಂತೆ ಈ ಸಿನಿಮಾ ಮಾಡಿತ್ತು. ಇದರಿಂದ ಯಾವುದೇ ಪಾತ್ರಕ್ಕೂ ನಾನು ಸೈ ಎನ್ನುವುದನ್ನು ಸುದೀಪ್ ಅವರು ತೋರಿಸಿಕೊಟ್ಟಿದ್ದರು. ಈ ಸಿನಿಮಾ ರಿಲೀಸ್ ಆಗಿ ಇಂದಿಗೆ 14 ವರ್ಷ ತುಂಬಿದೆ. ಈ ಬಗ್ಗೆ ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ನೆಟ್ಟಿಗರು ಏನಂದ್ರು?
ಈ ಎರಡು ಸಿನಿಮಾ ಮಾತ್ರವಲ್ಲ ಜನರು ನಿಮ್ಮನ್ನು ನೆಚ್ಚಿಕೊಂಡಿದ್ದು ಮೈ ಆಟೋಗ್ರಾಫ್ ಹಾಗೂ ಸ್ವಾತಿ ಮುತ್ತು ಹಾಗೂ ಇನ್ನಿತರ ಸಿನಿಮಾದಿಂದ ಎಂದಿದ್ದಾರೆ. ಕೆಲವೊಬ್ಬರು ವೇಟಿಂಗ್ ಫಾರ್ ಬಿಲ್ಲ ಭಾಷಾ ರಂಗಾ ಸಿನಿಮಾ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮನ್ನು ಜಪಾನ್ ಮತ್ತು ಚೀನಾದ ನಿವಾಸಿಗಳು ಗುರುತಿಸುವಂತಾಗಲಿ ಎಂದು ಮತ್ತೊಬ್ಬರು ಹೇಳಿದ್ದಾರೆ, (ಏಜೆನ್ಸೀಸ್).