ಸಿನಿವಾಣಿ

ಕಂಗನಾಗೆ ಪಾಸಿಟಿವ್ … ಗೆದ್ದು ಬರುವ ವಿಶ್ವಾಸ ವ್ಯಕ್ತಪಡಿಸಿದ ನಟಿ

chetannadiger

ಮುಂಬೈ: ಕರೊನಾ ಎರಡನೆಯ ಅಲೆ ದೇಶದಲ್ಲಿ ಹೆಚ್ಚಾಗಿದ್ದು, ಬಾಲಿವುಡ್​ನ ಹಲವು ನಟ-ನಟಿಯರು ಇತ್ತೀಚಿನ ದಿನಗಳಲ್ಲಿ ಕರೊನಾ ಪಾಸಿಟಿವ್​ ಆಗಿದ್ದಾರೆ. ಈಗ ಆ ಸಾಲಿಗೆ ಕಂಗನಾ ರಣಾವತ್​ ಸಹ ಸೇರಿಕೊಂಡಿದ್ದಾರೆ.

ಶನಿವಾರ ಈ ಕುರಿತು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಕಂಗನಾ, ತಮಗೆ ಕರೊನಾ ಪಾಸಿಟಿವ್​ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕರೊನಾ ಎಂಬ ವೈರಸ್​ನ್ನು ಹೊಸಕಿ ಹಾಕುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿರುವ ಅವರು, ಕಳೆದ ಕೆಲವು ದಿನಗಳಿಂದ ಬಹಳ ಸುಸ್ತಾಗುತ್ತಿತ್ತು ಮತ್ತು ಕಣ್ಣಿನಲ್ಲಿ ಉರಿಯಾಗುತ್ತಿತ್ತು. ಹಿಮಾಚಲ ಪ್ರದೇಶಕ್ಕೆ ವಾಪಸ್ಸು ಹೋಗಿ, ಅಲ್ಲಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳೋಣ ಎಂದುಕೊಳ್ಳುವುಷ್ಟರಲ್ಲೇ ನನಗೆ ಕರೊನಾ ಪಾಸಿಟಿವ್ ಎಂದು ಗೊತ್ತಾಗಿದೆ. ನಾನು ಕ್ವಾರಂಟೈನ್​ನಲ್ಲಿದ್ದೇನೆ. ಕರೊನಾ ವೈರಸ್​ ನನ್ನ ದೇಹದಲ್ಲಿ ಪಾರ್ಟಿ ಮಾಡುತ್ತಿದೆ ಎಂಬ ವಿಷಯವೇ ನನಗೆ ಗೊತ್ತಿರಲಿಲ್ಲ. ಈಗ ಗೊತ್ತಾಗಿರುವುದರಿಂದ, ಆದಷ್ಟು ಬೇಗ ಅದನ್ನು ಹೊಸಕಿ ಹಾಕುತ್ತೇನೆ ಎಂಬ ವಿಶ್ವಾಸವಿದೆ. ಕರೊನಾಗೆ ನಿಮ್ಮ ಮೇಲೆ ಆಕ್ರಮಣ ಮಾಡುವುದಕ್ಕೆ ಅವಕಾಶ ಕೊಡಬೇಡಿ. ನೀವು ಹೆದರಿದರೆ, ಅದು ನಿಮ್ಮನ್ನು ಮತ್ತಷ್ಟು ಹೆದರಿಸುತ್ತದೆ. ಕರೊನಾ ಎಂಬುದು ಸಣ್ಣ ಜ್ವರವಷ್ಟೇ. ಅದಕ್ಕೆ ಅತಿಯಾದ ಪ್ರಚಾರ ಸಿಕ್ಕಿದ್ದರಿಂದಲೇ, ಅದು ಜನರನ್ನು ಹೆದರಿಸುತ್ತಿದೆ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಕಂಗನಾ ಇತ್ತೀಚಿನವರೆಗೂ ಟ್ವಿಟರ್​ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ, ಟ್ವಿಟರ್​ನಿಂದ ಶಾಶ್ವತವಾಗಿ ಬಹಿಷ್ಕಾರಗೊಂಡ ಮೇಲೆ, ಕಂಗನಾ ಇನ್​ಸ್ಟಾಗ್ರಾಂಗೆ ಶಿಫ್ಟ್​ ಆಗಿದ್ದು, ಅದರ ಮೂಲಕ ತಮ್ಮ ಅಭಿಮಾನಿಗಳ ಜತೆಗೆ ಮಾತಾಡುತ್ತಿರುತ್ತಾರೆ.