ಸಿನಿವಾಣಿ

ಎ-ಗ್ರೇಡ್​ ನಟಿಯಾಗುವುದು ಹೇಗೆ? ತಾಪ್ಸಿಗೆ ಟೀಮ್​ ಕಂಗನಾ ಕೊಟ್ಟ ಸಲಹೆ ...

ಕಂಗನಾ ರಣಾವತ್​ ಮತ್ತು ತಾಪ್ಸಿ ಪನ್ನು ನಡುವಿನ ಯುದ್ಧ ಈಗ ಇನ್ನೊಂದು ಹಂತ ಮುಟ್ಟಿದೆ. ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆಯ ನಂತರ ನೆಪೋಟಿಸಂ (ಸ್ವಜನಪಕ್ಷಪಾತ)ದ ವಿಷಯವನ್ನು ಎತ್ತಿಕೊಂಡ ಕಂಗನಾ, ಈ ವಿಷಯವಾಗಿ ಕರಣ್ ಜೋಹರ್​ ಸೇರಿದಂತೆ ಬಾಲಿವುಡ್​ನ ದೊಡ್ಡದೊಡ್ಡ ನಿರ್ಮಾಪಕ-ನಿರ್ದೇಶಕರನ್ನು ಟಾರ್ಗೆಟ್​ ಮಾಡಿದರು. ಅದು ತಪ್ಪು ಎಂದು ಹೇಳಿದವರೂ ಟಾರ್ಗೆಟ್​ ಆದರು.

ಹಾಗೆ ತಪ್ಪು ಎಂದವರ ಪೈಕಿ ನಟಿ ತಾಪ್ಸಿ ಸಹ ಒಬ್ಬರು. ಕರಣ್​ ಜೋಹರ್​ ಪರವಾಗಿ ಮಾತನಾಡಿದ್ದಿಕ್ಕೆ, ತಾಪ್ಸಿಗೆ ಬಕೆಟ್​ ನಟಿ ಎಂಬ ಬಿರುದನ್ನು ಕಂಗನಾ ಮತ್ತು ತಂಡ ಕೊಟ್ಟರು. ಅಷ್ಟೇ ಅಲ್ಲ, ತಾಪ್ಸಿ ಒಬ್ಬ ಬಿ-ಗ್ರೇಡ್​ ನಟಿ ಎಂದು ಅಪಹಾಸ್ಯ ಮಾಡಿದರು.

ಈಗ ಕಂಗನಾ ತಂಡದವರು ಈ ಗಲಾಟೆಯನ್ನು ಇನ್ನಷ್ಟು ಮುಂದುವರೆಸಿದ್ದಾರೆ. ಈ ಹಿಂದೆ ಯಾವಾಗಲೋ, ತಾಪ್ಸಿ ಮಾಡಿದ ಟ್ವೀಟ್​ ಒಂದನ್ನು ಮುಂದಿಟ್ಟುಕೊಂಡು, ಮತ್ತೊಮ್ಮೆ ಪ್ರಹಾರ ನಡೆಸಿದ್ದಾರೆ. ಈ ಹಿಂದಿನ ಟ್ವೀಟ್​ವೊಂದರಲ್ಲಿ, ತಾಪ್ಸಿ ತಾನು ಎ-ಲಿಸ್ಟ್​ ನಟಿ ಅಲ್ಲ ಎಂದು ಹೇಳಿಕೊಂಡಿದ್ದರು. ಜತೆಗೆ, ಎ-ಲಿಸ್ಟ್​ ನಟಿಯಾಗುವುದಕ್ಕೆ ಏನು ಮಾಡಬೇಕು ಎಂಬುದು ತಮಗೆ ಗೊತ್ತಿಲ್ಲ ಎಂದು ಹೇಳಿಕೊಂಡಿದ್ದರು.

ಈಗ ಇದೇ ವಿಷಯವನ್ನು ಕಂಗನಾ ತಂಡದವರು ಎತ್ತಿಕೊಂಡಿದ್ದಾರೆ. ಎ-ಗ್ರೇಡ್​ ನಟಿಯಾಗುವುದು ಹೇಗೆ ಎಂದು ನಿಮಗೆ ಗೊತ್ತಿಲ್ಲದಿದ್ದರೆ, ನಾವು ಹೇಳಿಕೊಡುತ್ತೀವಿ ಎಂದು ಕಲೆವು ಸಲಹೆಗಳನ್ನು ಕೊಟ್ಟಿದ್ದಾರೆ.

ಒಳ್ಳೆಯ ನಟನೆ ಮತ್ತು ನೋಡುವುದಕ್ಕೆ ಚೆನ್ನಾಗಿದ್ದರಷ್ಟೇ ಸಾಲದು, ಒಂದು ದೊಡ್ಡ ಹಿಟ್​ ಸಹ ಅವಶ್ಯಕ ಎಂಬುದು ಟೀಮ್​ ಕಂಗನಾ ಅಭಿಪ್ರಾಯ. ಇದಕ್ಕೆ ಉದಾಹರಣೆಯಾಗಿ, ಅವರು ಕಂಗನಾ ರಣಾವತ್​ ಅಭಿನಯದ 'ಕ್ವೀನ್​', 'ತನು ವೆಡ್ಸ್​ ಮನು ರಿಟರ್ನ್ಸ್​' ಮತ್ತು 'ಮಣಿಕರ್ಣಿಕಾ' ಚಿತ್ರಗಳನ್ನು ಉದಾಹರಣೆಗೆ ನೀಡಿದ್ದಾರೆ. ಅಂತಹ ಬ್ಲಾಕ್​ಬಸ್ಟರ್​ಗಳನ್ನು ಕೊಟ್ಟರೆ ಮಾತ್ರ, ಎ-ಗ್ರೇಡ್​ ನಟಿಯಾಗುವುದಕ್ಕೆ ಸಾಧ್ಯ ಎಂದು ಕಾಲೆಳೆದಿದ್ದಾರೆ.

ಅಷ್ಟೇ ಅಲ್ಲ, ಕಂಗನಾ ಮತ್ತು ಅವರ ತಂಡದ ಪ್ರಕಾರ, ಸದ್ಯಕ್ಕೆ ತಾಪ್ಸಿ ಅವರ ವೃತ್ತಿಬದುಕು ಅಷ್ಟೇನೂ ಅದ್ಭುತವಾಗಿಲ್ಲವಂತೆ. ಅಷ್ಟೇ ಅಲ್ಲ, ಸುಶಾಂತ್​ಗೆ ನ್ಯಾಯ ಕೊಡಿಸಬೇಕು ಎಂದು ಕಂಗನಾ ಮಾಡುತ್ತಿರುವ ಹೋರಾಟವನ್ನು, ತಾಪ್ಸಿ ಯಾವ್ಯಾವುದೋ ವಿಚಾರದಿಂದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಮ್​ ಕಂಗನಾ ಅಭಿಪ್ರಾಯಪಟ್ಟಿದೆ.