ಮುಂಬೈ: ಕರಣ್ ಜೋಹರ್ ವಿರುದ್ಧ ಕಂಗನಾ ರಣಾವತ್ ಮತ್ತೆ ಗರಂ ಆಗಿದ್ದಾರೆ. ಈ ಬಾರಿಯೂ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರಾ ಎಂದುಕೊಳ್ಳಬೇಡಿ. ಬದಲಿಗೆ ಕಸದ ವಿಚಾರವಾಗಿ ಅವರು ಕರಣ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಹೌದು, ಧರ್ಮ ಪ್ರೊಡಕ್ಷನ್ನಲ್ಲಿ ದೀಪಿಕಾ ಪಡುಕೋಣೆ ಸಿನಿಮಾ ಮಾಡುತ್ತಿದ್ದಾರೆ. ಶಕುನ್ ಬಾತ್ರಾ ನಿರ್ದೇಶನ ಮಾಡುತ್ತಿರುವ ಈ ಚಿತ್ರ ಈಗಾಗಲೇ ಗೋವಾದಲ್ಲಿ ಚಿತ್ರೀಕರಣವನ್ನೂ ಮುಗಿಸಿಕೊಂಡಿದೆ. ಇದೇ ಚಿತ್ರದ ಶೂಟಿಂಗ್ ವೇಳೆ ಬಳಸಿದ ಪಿಪಿಯ ಕಿಟ್ ಅನ್ನು ಎಲ್ಲೆಂದರಲ್ಲಿ ಎಸೆಯಲಾಗಿದ್ದು, ಚಿತ್ರತಂಡದ ಈ ನಡೆ ಹಲವರ ಕಣ್ಣು ಕೆಂಪಾಗಿಸಿದೆ.
ಎಲ್ಲೆಂದರಲ್ಲಿ ಪಿಪಿಇ ಕಿಟ್ ಎಸೆದ ಫೋಟೋ ಸಮೇತ ನೆಟ್ಟಿಗರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ‘ದೀಪಿಕಾ ಅಥವಾ ಕರಣ್ ಜೋಹರ್ ಪರಿಸರ ಕಾಳಜಿ ಕುರಿತು ಮಾತನಾಡಿದರೆ ಅವರಿಗೆ ತಾವು ಗೋವಾದಲ್ಲಿ ಮಾಡಿರುವ ಈ ಘನಂಧಾರಿ ಕೆಲಸವನ್ನು ಜ್ಞಾಪಿಸಿ. ಬಯೋ ಮೆಡಿಕಲ್ ತ್ಯಾಜ್ಯಗಳನ್ನು ಪರಿಸರದ ನಡುವೆ ಎಲ್ಲೆಂದರಲ್ಲಿ ಎಸೆದಿದ್ದಾರೆ. ಅವರಿಗೆ ದೊಡ್ಡ ಮೊತ್ತದಲ್ಲಿ ದಂಡ ವಿಧಿಸಬೇಕು’ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಮತ್ತೊಮ್ಮೆ ರಾಣಿಯಾಗಿ ಸುಮಲತಾ
ಆ ಪೋಸ್ಟ್ ಶೇರ್ ಮಾಡಿಕೊಂಡಿರುವ ಕಂಗನಾ, ‘ಸಿನಿಮಾ ಕ್ಷೇತ್ರ ಇದೀಗ ಪರಿಸರ ನಾಶ ಮಾಡುವ ಕೆಲಸಕ್ಕೆ ಕೈಹಾಕಿದೆ. ನೈತಿಕತೆ ಮತ್ತು ಸಂಸ್ಕೃತಿಯನ್ನು ಮರೆತು ವರ್ತಿಸುತ್ತಿದೆ. ಮಾನ್ಯ ಕೇಂದ್ರ ಪರಿಸರ ಸಚಿವ ಪ್ರಕಾಶ್ ಅವರೇ, ಬಾಲಿವುಡ್ ಬಹುದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಉದ್ಧಟತನವಿದು, ಬೇಜವಾಬ್ದಾರಿಯ ಪರಮಾವಧಿ ಇದು. ದಯವಿಟ್ಟು ನಮ್ಮ ಪರಿಸರವನ್ನು ಕಾಪಾಡಿ’ ಎಂದು ಕೋರಿದ್ದಾರೆ. (ಏಜೆನ್ಸೀಸ್)