ಸಿನಿವಾಣಿ

'ಎಮರ್ಜೆನ್ಸಿ' ಆಯ್ತು; ಮುಂದೇನು ಎಂದು ಬಹಿರಂಗಪಡಿಸಿದ ಕಂಗನಾ …

ಚೆನ್ನೈ: ಕೆಲವು ದಿನಗಳ ಹಿಂದಷ್ಟೇ ತಮ್ಮ ನಿರ್ದೇಶನದ 'ಎಮರ್ಜೆನ್ಸಿ' ಚಿತ್ರದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದರು ಬಾಲಿವುಡ್​ ನಟಿ ಕಂಗನಾ ರಣಾವತ್​. ಆ ಚಿತ್ರಕ್ಕಾಗಿ ಏನೆಲ್ಲ ಕಷ್ಟ ಪಡಬೇಕಾಯಿತು ಎಂಬುದನ್ನು ಬಹಿರಂಗಪಡಿಸಿದ್ದರು. ಆದರೆ, ಆ ಚಿತ್ರದ ನಂತರ ಮುಂದೇನು ಎಂಬ ವಿಷಯವನ್ನು ಹೇಳಿಕೊಂಡಿರಲಿಲ್ಲ.

ಈಗ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದ ಹಾಡಿನ ರಿಹರ್ಸಲ್​ನಲ್ಲಿ ಭಾಗವಹಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಅಂದಹಾಗೆ, ಕಂಗನಾ ಅಭಿನಯದ ಹೊಸ ಚಿತ್ರ ಯಾವುದು ಗೊತ್ತಾ? 'ಚಂದ್ರಮುಖಿ 2'.

ರಜನಿಕಾಂತ್​, ಜ್ಯೋತಿಕಾ ಅಭಿನಯದಲ್ಲಿ ಕೆಲವು ವರ್ಷಗಳ ಹಿಂದೆ ಪಿ. ವಾಸು, 'ಚಂದ್ರಮುಖಿ' ಎಂಬ ಚಿತ್ರವನ್ನು ನಿರ್ದೇಶಿಸಿದ್ದು ನೆನಪರಿಬಹುದು. ಇದು ಕನ್ನಡದ 'ಆಪ್ತಮಿತ್ರ' ಚಿತ್ರದ ರೀಮೇಕ್​ ಆಗಿತ್ತು. ಈ ಚಿತ್ರ ಯಶಸ್ವಿಯಾದ ಮೇಲೆ, ಇದರ ಮುಂದುವರೆದ ಭಾಗ ಬರಬಹುದು ಎಂಬ ಸುದ್ದಿ ಇತ್ತು. ಆದರೆ, ಅದು ತಡವಾಗಿ, ಈಗ ಕೊನೆಗೂ 'ಚಂದ್ರಮುಖಿ 2' ಬರುತ್ತಿದೆ. ಈ ಚಿತ್ರದಲ್ಲಿ ರಜನಿಕಾಂತ್​ ಬದಲು, ರಾಘವ ಲಾರೆನ್ಸ್​ ನಟಿಸುತ್ತಿದ್ದಾರೆ. ಇನ್ನು, ಪಿ. ವಾಸು ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಕಂಗನಾ, ''ಚಂದ್ರಮುಖಿ 2' ಚಿತ್ರದ ಕ್ಲೈಮ್ಯಾಕ್ಸ್​ ಹಾಡಿನ ರಿಹರ್ಸಲ್​ನಲ್ಲಿ ಭಾಗಿಯಾಗಿದ್ದೇನೆ. ಕಲಾ ಮಾಸ್ಟರ್​ ಅವರು ನೃತ್ಯ ನಿರ್ದೇಶನ ಮಾಡಿದರೆ, ಗೋಲ್ಡನ್​ ಗ್ಲೋಬ್​ ಪ್ರಶಸ್ತಿ ವಿಜೇತ ಎಂ.ಎಂ. ಕೀರವಾಣಿ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಪಿ. ವಾಸು ಈ ಚಿತ್ರದ ನಿರ್ದೇಶಕರು' ಎಂದು ಬರೆದುಕೊಂಡಿದ್ದಾರೆ ಕಂಗನಾ.

'ಚಂದ್ರಮುಖಿ 2' ಚಿತ್ರವಲ್ಲದೆ 'ತೇಜಸ್​' ಮತ್ತು 'ನಟಿ ಬಿನೋದಿನಿ' ಚಿತ್ರಗಳಲ್ಲೂ ಕಂಗನಾ ಅಭಿನಯಿಸುತ್ತಿದ್ದಾರೆ.