ಮುಂಬೈ: ಮನೆಕೆಲಸವನ್ನು ಉದ್ಯೋಗ ಎಂದು ಪರಿಗಣಿಸಬೇಕು ಮತ್ತು ಅದಕ್ಕೆ ಸಂಬಳ ನಿಗದಿಪಡಿಸಬೇಕು ಎಂದು ಇತ್ತೀಚೆಗಷ್ಟೇ ನಟ ಮತ್ತು ಮಕ್ಕಳ್ ಮಯ್ಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಹೇಳಿದ್ದರು. ಇದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಾಗೆಯೇ ಟೀಕೆ-ಟಿಪ್ಪಣಿಗಳು ಸಹ ಕೇಳಿಬಂದಿತ್ತು.
ಈಗ ನಟಿ ಕಂಗನಾ ರಣಾವತ್ ಸಹ ಪ್ರತಿಕ್ರಿಯಿಸಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ಆಗಾಗ ಟಾಂಗ್ ಕೊಡುವ ಕಂಗನಾ, ಇದೀಗ ಕಮಲ್ ಹಾಸನ್ ಅವರಿಗೂ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಾವು ಮಾಡುವ ಕೆಲಸಗಳಿಗೆ ಬೆಲೆ ಕಟ್ಟಬೇಡಿ. ನಮ್ಮ ಪ್ರೀತಿಗೆ ದುಡ್ಡು ಕೊಡಬೇಡಿ. ನಮ್ಮ ಪುಟ್ಟ ಸಾಮ್ರಾಜ್ಯದ ರಾಣಿಯಾಗಿರುವುದಕ್ಕೆ ನಮಗೆ ಸಂಬಳದ ಅವಶ್ಯಕತೆ ಇಲ್ಲ. ನಿಮ್ಮ ಮನೆಯವರಿಗೆ ನಿಮ್ಮ ಪ್ರೀತಿ, ಗೌರವ, ಸಂಬಳವಷ್ಟೇ ಅಲ್ಲ, ನೀವೇ ಪೂರ್ತಿಯಾಗಿ ಬೇಕು' ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಸಂಸದ ಶಶಿ ತರೂರ್ ಅವರು ಕಮಲ್ ಹಾಸನ್ ಅವರ ಮಾತನ್ನು ಸ್ವಾಗತಿಸಿದ್ದರು. ಗೃಹಿಣಿಯರಿಗೆ ಸಂಬಳ ಕೊಡುವಂತಾಗಬೇಕು ಎಂದು ಹೇಳಿದ್ದರು. ಇದರ ವಿರುದ್ಧವೂ ಹರಿಹಾಯ್ದಿರುವ ಕಂಗನಾ, 'ಮನೆಯ ಒಡತಿಯನ್ನು ಒಬ್ಬ ಸಾಮಾನ್ಯ ನೌಕರಳನ್ನಾಗಿ ಮಾಡಬೇಕಿ. ಒಬ್ಬ ಮಹಿಳೆ ತನ್ನ ಕುಟುಂಬದವರಿಗೆ ಮಾಡುವ ತ್ಯಾಗಕ್ಕೆ ಬೆಲೆ ಕಟ್ಟಬೇಡಿ. ಇದೊಂಥರಾ ದೇವರಿಗೆ ಸೃಷ್ಟಿ ಮಾಡಿದ್ದಿಕ್ಕೆ ದುಡ್ಡುಕೊಟ್ಟಂತಾಗುತ್ತದೆ. ಇದೊಂಥರಾ ನೋವಿನ ವಿಷಯವಷ್ಟೇ ಅಲ್ಲ, ಹಾಸ್ಯಾಸ್ಪದ ಕೂಡಾ' ಎಂದು ಅವರು ಹೇಳಿಕೊಂಡಿದ್ದಾರೆ.