ಬೆಂಗಳೂರು: ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಒಂಟಿ ಜೀವನಕ್ಕೆ ಗುಡ್ಬೈ ಹೇಳಿ ಜಂಟಿಯಾಗುವುದಕ್ಕೆ ತಯಾರಾಗಿದ್ದಾರೆ. ಈ ವಿಚಾರವನ್ನು ಸ್ವತಃ ಕಾಜಲ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು, ಉದ್ಯಮಿ ಗೌತಮ್ ಕಿಚ್ಲು ಜತೆಗೆ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ.
ಇದೇ ತಿಂಗಳ 30ಕ್ಕೆ ಮುಂಬೈನಲ್ಲಿ ಸರಳ ಕಾರ್ಯಕ್ರಮದಲ್ಲಿ ಮದುವೆ ನಡೆಯಲಿದ್ದು, ಆಪ್ತರು ಮತ್ತು ಕುಟುಂಬದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ‘ಅಕ್ಟೋಬರ್ 30ರಂದು ಮುಂಬೈನಲ್ಲಿ ಗೌತಮ್ ಕಿಚ್ಲ್ಲು ಅವರನ್ನು ಮದುವೆಯಾಗುತ್ತಿರುವ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ತುಂಬ ಸಂತಸವಾಗುತ್ತಿದೆ. ಇದೊಂದು ಖಾಸಗಿ ಸಮಾರಂಭವಾಗಿರಲಿದೆ. ಎರಡೂ ಕುಟುಂಬ ಮತ್ತು ಆಪ್ತರು ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ನಾವಿಬ್ಬರೂ ಹೊಸ ಜೀವನವನ್ನು ಆರಂಭಿಸುತ್ತಿರುವ ಬಗ್ಗೆ ತುಂಬ ಥ್ರಿಲ್ ಆಗಿದ್ದೇವೆ. ನೀವೆಲ್ಲರೂ ನಮಗೆ ಒಳ್ಳೆಯ ಮನಸ್ಸಿನಿಂದಲೇ ಹಾರೈಸುತ್ತಿರಾ ಎಂದು ತಿಳಿದಿದ್ದೇನೆ. ಯಥಾ ಪ್ರಕಾರ ಸಿನಿಮಾ ಕೆಲಸ ಮುಂದುವರಿಯಲಿದೆ’ ಎಂದು ಕಾಜಲ್ ಹೇಳಿಕೊಂಡಿದ್ದಾರೆ.
ಗೌತಮ್ ಜತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಈ ಮೊದಲೇ ಹರಿದಾಡಿತ್ತಾದರೂ, ಎಲ್ಲಿಯೂ ಆ ವಿಚಾರವನ್ನು ಕಾಜಲ್ ಬಹಿರಂಗ ಪಡಿಸಿರಲಿಲ್ಲ. ನಿಶ್ಚಿತಾರ್ಥ ಸಹ ನೆರವೇರಿದೆ ಎಂದೇ ಹೇಳಲಾಗಿತ್ತು. ಇದೀಗ ನೇರವಾಗಿ ಮದುವೆ ವಿಚಾರವನ್ನೇ ಹೇಳಿಕೊಂಡು ಅಭಿಮಾನಿಗಳಿಗೆ ಸರ್ಪ್ರೖೆಸ್ ನೀಡಿದ್ದಾರೆ. ಅಂದಹಾಗೆ, ಗೌತಮ್ ಕಿಚ್ಲು ಉದ್ಯಮಿ, ಇಂಟಿರಿಯರ್ ಡಿಸೈನರ್, ಟೆಕ್ ಮತ್ತು ವಿನ್ಯಾಸ ಉತ್ಸಾಹಿಯಾಗಿದ್ದಾರೆ. -ಏಜೆನ್ಸೀಸ್