ಸಿನಿವಾಣಿ

ಎಲ್ಲ ಕಾಲಕ್ಕೂ ಸಲ್ಲುವ ಕಾಗೆ ಮೊಟ್ಟೆ; ಅ.1ಕ್ಕೆ ರಾಜ್ಯಾದ್ಯಂತ ಚಿತ್ರ ಬಿಡುಗಡೆ

ಬೆಂಗಳೂರು: ಟ್ರೇಲರ್ ಮೂಲಕವೇ ಸದ್ದು ಮಾಡಿದ್ದ ‘ಕಾಗೆ ಮೊಟ್ಟೆ’ ಚಿತ್ರಕ್ಕೀಗ ಜಗ್ಗೇಶ್ ಅವರಿಂದಲೂ ಹಾರೈಕೆ ಸಿಕ್ಕಿದೆ. ಅ.1ರಂದು ಬಿಡುಗಡೆ ಆಗಲಿರುವ ಈ ಸಿನಿಮಾ ಬಗ್ಗೆ ಮಾತನಾಡಲು ಮಂಗಳವಾರಷ್ಟೇ ಮಾಧ್ಯಮದ ಮುಂದೆ ಚಿತ್ರತಂಡದ ಜತೆಗೆ ಜಗ್ಗೇಶ್ ಆಗಮಿಸಿ ಸಿನಿಮಾ, ಜೀವನ ಸೇರಿ ವಿಚಾರಗಳನ್ನು ಹಂಚಿಕೊಂಡರು. ‘ಕಾಗೆ ಮೊಟ್ಟೆ’ ಬಗ್ಗೆಯೂ ಮೆಚ್ಚುಗೆ ಮಾತುಗಳನ್ನಾಡಿದರು.

‘ಕರೊನಾ ಬರುವುದಕ್ಕೂ ಮುನ್ನವೇ ‘ಕಾಗೆ ಮೊಟ್ಟೆ’ ಸಿನಿಮಾ ನೋಡಿದ್ದೇನೆ. ಸಿನಿಮಾ ನೋಡಿ ಎರಡು ದಿನ ಆದರೂ ನನ್ನ ಮೈಂಡ್​ನಿಂದ ದೃಶ್ಯಗಳು ಹೋಗಿರಲಿಲ್ಲ. ನಿಜಕ್ಕೂ ಇಂಥ ಸಿನಿಮಾ ತೆಗೆಯುವುದು ನನ್ನಿಂದ ಆಗುವುದಿಲ್ಲ. ನಾನು ನಿರ್ದೇಶಕನಾಗಿದ್ದೇನೆ, ನಿರ್ವಪಕನಾಗಿದ್ದೇನೆ, ಡಿಸ್ಟ್ರಿಬ್ಯೂಟರ್ ಸಹ ಆಗಿದ್ದೇನೆ. ಇಂಥ ಸಿನಿಮಾ ತೆಗೆಯಲು ಮಾತ್ರ ಆಗಲ್ಲ. ಚಿತ್ರದಲ್ಲಿ ಅಷ್ಟೊಂದು ಗಾಢತೆ ಇದೆ’ ಎಂದರು. ಚಿತ್ರರಂಗದಲ್ಲಿ ಯಶಸ್ಸು ಸುಲಭವಲ್ಲ, ತಾಳ್ಮೆ ಬಹಳ ಮುಖ್ಯ ಎನ್ನುವ ಜಗ್ಗೇಶ್, ‘ನನಗೆ ಈಗಲೇ ಯಶಸ್ಸು ಸಿಗಬೇಕು, ಮುಂದಿನ ಗಳಿಗೆಗೆ ಸಿಗಬೇಕು ಎನ್ನುವುದು ತಪ್ಪು. 80ನೇ ಇಸ್ವಿನಲ್ಲಿ ನಾನು ಸಿನಿಮಾಕ್ಕೆ ಬಂದಿದ್ದೆ. ಆಗ ಪತ್ರಿಕೆಯಲ್ಲಿ ನನ್ನ ಹೆಸರು ಬಂದಿತ್ತು. ಅದೇ ಹೆಸರು ಸಿನಿಮಾ ಪರದೆಯ ಮೇಲೆ ಬರಬೇಕೆಂದರೆ ಎಂಟು ವರ್ಷವಾಯಿತು. ಕಾಯಬೇಕು. ಕಾದವ ಮೇಧಾವಿ, ನುಗ್ಗಿದವ ಮೂರ್ಖ. ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ, ಒಂದಲ್ಲ ಒಂದು ದಿನ ಯಶಸ್ಸು ಒಂದೇ ಬರುತ್ತದೆ. ಅದೇ ರೀತಿ ಗುರು, ತಪಸ್ವಿ ತರಹ ಕೆಲಸ ಮಾಡುತ್ತಿದ್ದಾನೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದರು.

‘ನಮ್ಮ ಶ್ರಮದ ‘ಕಾಗೆ ಮೊಟ್ಟೆ’ ಸಿನಿಮಾ ಸ್ನೇಹಕ್ಕೆ ಸಂಬಂಧಿಸಿದ ಸಿನಿಮಾ. ಸ್ನೇಹ ಯಾವತ್ತಿದ್ದರೂ ಸ್ನೇಹವೇ. ಅದು ಔಟ್​ಡೇಟ್ ಆಗುವುದಿಲ್ಲ. ನಾಲ್ಕು ವರ್ಷದ ಹಳೇ ಚಿತ್ರ ಎಂದಿದ್ದರು. ಸ್ನೇಹಕ್ಕೆ ಸಂಬಂಧಿಸಿದ ಹತ್ತಾರು ವರ್ಷಗಳ ಹಿಂದಿನ ಸಿನಿಮಾ ಇರಲಿ, ಆಗಿನ ಬ್ಲಾಕ್ ಆಂಡ್ ವೈಟ್ ಚಿತ್ರಗಳೇ ಇರಲಿ, ಈಗಲೂ ನೋಡುತ್ತೇವೆ. ಅದೇ ರೀತಿ ‘ಕಾಗೆ ಮೊಟ್ಟೆ’ ಸಹ ಈಗಲೂ ಸಲ್ಲುತ್ತದೆ’ ಎನ್ನುತ್ತಾರೆ ಗುರುರಾಜ್. ಚಂದ್ರಹಾಸ್ ನಿರ್ದೇಶನದ ಈ ಚಿತ್ರದಲ್ಲಿ ಗುರುರಾಜ್ ಜತೆಗೆ ಕೆ. ಮಾದೇಶ್, ಹೇಮಂತ್ ನಟಿಸಿದ್ದಾರೆ. ತನುಜಾ ನಾಯಕಿಯಾಗಿದ್ದಾರೆ. ಸುಬ್ಬರಾಯುಡು, ಎಚ್. ಎನ್. ಶ್ರೀನಿವಾಸಯ್ಯ ಈ ಚಿತ್ರದ ನಿರ್ವಪಕರು.