ಸಿನಿವಾಣಿ

ಸಂಕ್ರಾಂತಿಗೆ ಸರ್​ಪ್ರೈಸ್​ ಕೊಡಲು ಸಜ್ಜಾಗಿದೆ 'ಕಬ್ಜ' ಚಿತ್ರತಂಡ

ಬೆಂಗಳೂರು: ಉಪೇಂದ್ರ ಅಭಿನಯದ 'ಕಬ್ಜ' ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಮುಗಿದು, ಚಿತ್ರ ಬಿಡುಗಡೆಗೆ ಸಿದ್ಧವಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ನಿಂತಿದ್ದ ಚಿತ್ರೀಕರಣವೇ ಇನ್ನೂ ಪ್ರಾರಂಭವಾಗಿಲ್ಲ. ಜನವರಿಯಲ್ಲಿ ಇನ್ನೊಂದು ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ನಿರ್ದೇಶಕ ಆರ್​. ಚಂದ್ರು ಹೇಳಿದ್ದರೂ, ಚಿತ್ರೀಕರಣ ಇನ್ನಷ್ಟೇ ಪ್ರಾರಂಭವಾಗಬೇಕಿದೆ.

ಈ ಮಧ್ಯೆ, ಚಿತ್ರತಂಡದಿಂದ ಒಂದು ಘೋಷಣೆ ಹೊರಬಿದ್ದಿದೆ. ಅದೇನೆಂದರೆ, ಸುಗ್ಗಿ ಹಬ್ಬ ಸಂಕ್ರಾಂತಿ ಸಮೀಪದಲ್ಲಿದ್ದು, ಆ ಸುದಿನದಂದು‌ 'ಕಬ್ಜ' ಚಿತ್ರತಂಡ ಸಿನಿರಸಿಕರಿಗೆ ಸರ್ ಪ್ರೈಸ್ ನೀಡಲಿದೆ. ಸಂಕ್ರಾಂತಿ ಹಬ್ಬದ ದಿನ‌, ಅಂದರೆ ಜನವರಿ 14ರ ಗುರುವಾರ ಬೆಳಿಗ್ಗೆ 10ಕ್ಕೆ ಆ ಸರ್​ಪ್ರೈಸ್​ ಏನು ಎಂಬುದು ಗೊತ್ತಾಗಲಿದೆ. 'ಸೂಪರ್ ಸ್ಟಾರ್' ಉಪೇಂದ್ರ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸುತ್ತಿದ್ದಾರೆ.

'ಕಬ್ಜ' ಚಿತ್ರಕ್ಕಾಗಿ ಬೆಂಗಳೂರು, ಹೈದರಾಬಾದ್ ಮುಂತಾದ ಕಡೆ ನಿರ್ಮಿಸಲಾಗಿರುವ ಅದ್ದೂರಿ ಸೆಟ್​ಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಶೇ.40ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಬಾಕಿ ಉಳಿದಿರುವ ಚಿತ್ರೀಕರಣವನ್ನು ಜನವರಿ ಕೊನೆಯಿಂದ ಪ್ರಾರಂಭಿಸಿ, ಆದಷ್ಟು ಬೇಗ ಮುಕ್ತಾಯಗೊಳಿಸುವುದಕ್ಕೆ ಚಂದ್ರು ಸಜ್ಜಾಗಿದ್ದಾರೆ.

ಉಪೇಂದ್ರ ಅವರು ಈ ಚಿತ್ರಕ್ಕಾಗಿ ನಾಲ್ಕು ಘಂಟೆಗೂ ಹೆಚ್ಚು ಕಾಲ ವ್ಯಾಯಾಮ ಮಾಡಿ, ಪಾತ್ರಕ್ಕೆ ಬೇಕಾದ ಹಾಗೆ ಸಜ್ಜಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಚಿತ್ರದ ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದ್ದು, ಕಾಮರಾಜನ್ (ಐ ಮೂವಿ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ ರಾವ್​, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಎಂ.ಟಿ.ಬಿ ನಾಗರಾಜ್ ಈ ಚಿತ್ರವನ್ನು ಅರ್ಪಿಸುತ್ತಿದ್ದು, ಆರ್ ಚಂದ್ರು ಅವರೇ ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತ, ಎ.ಜೆ.ಶೆಟ್ಟಿ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ಸಂಕ್ರಾಂತಿ ಹಬ್ಬಕ್ಕೆ ಚಿತ್ರತಂಡದವರು ಸರ್​ಪ್ರೈಸ್​ ನೀಡಬಹುದು ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.